ಬೆಂಗಳೂರು:ಖಾಸಗಿ ಚಾನಲ್ವೊಂದರಲ್ಲಿ ಪ್ರಸಾರವಾಗಲಿರುವ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದ ಹೊಚ್ಚ ಹೊಸ ಧಾರಾವಾಹಿ "ಜೀವ ಹೂವಾಗಿದೆ"ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟಿ ಶಿಲ್ಪಾ ರವಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಸುನೀಲ್ ನಿರ್ದೇಶನದ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ಮಧುಮಿತಾ ಪಾತ್ರದಲ್ಲಿ ನಟಿಸಲಿರುವ ಶಿಲ್ಪಾ ರವಿ, ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. " ವರನಟ ರಾಜ್ ಕುಮಾರ್ ಅವರ ಕುಟುಂಬದೊಂದಿಗೆ ನನ್ನ ಸಂಬಂಧ ಮುಂದುವರಿದಿದೆ ಎಂದರೆ ಅದಕ್ಕೆ ಜೀವ ಹೂವಾಗಿದೆ ಧಾರಾವಾಹಿಯೇ ಕಾರಣ. ನಾನು ಕಳೆದ ಬಾರಿ ಶಿವರಾಜ್ ಕುಮಾರ್ ನಿರ್ಮಾಣದ ಮಾನಸ ಸರೋವರದಲ್ಲಿ ನಾಯಕಿಯಾಗಿ ಅಭಿನಯಿಸಿದೆ. ಇದೀಗ ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಎರಡೆರಡು ಬಾರಿ ಪ್ರತಿಷ್ಠಿತ ಬ್ಯಾನರ್ ಅಡಿಯಲ್ಲಿ ನಟಿಸಲು ಅವಕಾಶ ದೊರೆತಿರುವುದು ತುಂಬಾ ಸಂತೋಷದ ವಿಚಾರ ಎನ್ನುತ್ತಾರೆ ಶಿಲ್ಪಾ ರವಿ.