ಕನ್ನಡ ಕಿರುತೆರೆಯಲ್ಲಿ ಡಬ್ಬಿಂಗ್ ಧಾರಾವಾಹಿಗಳ ಪಾರುಪತ್ಯ ಶುರುವಾಗಿ ತಿಂಗಳುಗಳೇ ಕಳೆದುಹೋಗಿವೆ. ಮಹಾಭಾರತ , ರಾಧಾಕೃಷ್ಣ , ದೇವಕಿ ನಂದನ, ಪರಮಾವತಾರಿ ಶ್ರೀಕೃಷ್ಣ, ಗಣೇಶ, ಅಲಾದ್ದಿನ್, ಮಹಾನಾಯಕ ಅಂಬೇಡ್ಕರ್ ಮುಂತಾದ ಧಾರಾವಾಹಿಗಳ ನಡುವೆ ಮತ್ತೊಂದು ಡಬ್ಬಿಂಗ್ ಧಾರಾವಾಹಿ ಬರುತ್ತಿದೆ.
ಇದೀಗ 'ಕಥೆಯ ರಾಜಕುಮಾರಿ' ಎಂಬ ಮತ್ತೊಂದು ಡಬ್ಬಿಂಗ್ ಧಾರಾವಾಹಿ ಕೂಡಾ ಆರಂಭವಾಗಲಿದೆ. ತೆಲುಗಿನ 'ಕಥಲೋ ರಾಜಕುಮಾರಿ' ಈಗ ಕನ್ನಡಕ್ಕೆ ಡಬ್ ಆಗಿ 'ಕಥೆಯ ರಾಜಕುಮಾರಿ' ಆಗಿ ನಿಮ್ಮ ಮುಂದೆ ಮುಂದಿನ ವಾರದಿಂದ ಬರಲಿದ್ದಾಳೆ. ಇದೇ ಜುಲೈ 13 ರಿಂದ ಪ್ರತಿದಿನ ಮಧ್ಯಾಹ್ನ 1.30 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರ ಕಾಣಲಿದೆ.
ತಮಿಳಿನ ರಾಜ ರಾಣಿ ಸೀರಿಯಲ್ ರಿಮೇಕ್ ಇದಾಗಿದ್ದು ಮನೆ ಕೆಲಸದವಳಾದ ನಾಯಕಿ ಸಿಂಗಾಪುರದಲ್ಲಿ ನೆಲೆಸಿರುವ ನಾಯಕನನ್ನು ಮದುವೆಯಾಗಿ ಒಳ್ಳೆ ಸೊಸೆ ಎನ್ನಿಸಿಕೊಳ್ಳಲು ಮಾಡುವ ಪ್ರಯತ್ನದ ಕಥೆಯನ್ನು ಈ ಧಾರಾವಾಹಿ ಹೊಂದಿದೆ. ಈ ಮೊದಲು ಇದೇ ರೀತಿಯ ಕಥೆಯನ್ನೊಳಗೊಂಡ 'ಪುಟ್ಮಲ್ಲಿಧಾರಾವಾಹಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿ ವೀಕ್ಷಕರ ಮೆಚ್ಚುಗೆ ಕೂಡಾ ಪಡೆದಿತ್ತು.
ಅನ್ನಪೂರ್ಣ ಸ್ಟುಡಿಯೋಸ್ ನಿರ್ಮಾಣದಲ್ಲಿ ತಯಾರಾಗಿರುವ ಈ ಧಾರಾವಾಹಿಯಲ್ಲಿ ಪ್ರಿಯಾಂಕ, ಮಧುಸೂಧನ್, ಆಶಿಕಾ ಗೋಪಾಲ್ ಪಡುಕೋಣೆ , ಅನುಷಾ ರೆಡ್ಡಿ , ಸುಷ್ಮಾ ರೆಡ್ಡಿ , ಮಧುರೆಡ್ಡಿ ,ನಿಹಾರಿಕಾ ,ಕಲ್ಯಾಣ್, ಸುಧೀರ್ , ಹೃತೇಶ್ ಮುಂತಾದವರು ನಟಿಸಿದ್ದಾರೆ.
ಪೌರಾಣಿಕ ಧಾರಾವಾಹಿಗಳ ನಡುವೆ 'ಕಥೆಯ ರಾಜಕುಮಾರಿ' ಮೊದಲ ಡಬ್ಬಿಂಗ್ ಕೌಟುಂಬಿಕ ಧಾರಾವಾಹಿ ಎನಿಸಿಕೊಳ್ಳಲಿದೆ. ಎಲ್ಲರ ವಿರೋಧದ ನಡುವೆಯೂ ಚಾನೆಲ್ಗಳು ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಡಬ್ಬಿಂಗ್ ಧಾರಾವಾಹಿಗಳಿಗೆ ಕೆಲವರ ವಿರೋಧ ಇದ್ದರೆ, ಮತ್ತೆ ಕೆಲವರು ಸಂತೋಷದಿಂದ ನೋಡುತ್ತಿದ್ದಾರೆ.