ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಾಯಕಿ ಶ್ರುತಿ ಅಲಿಯಾಸ್ ಗೊಂಬೆಯಾಗಿ ನಟಿಸಿ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ನೇಹಾ ರಾಮಕೃಷ್ಣ ಇದೀಗ ವಿಭಿನ್ನ ರೀತಿಯ ಫೋಟೋಶೂಟ್ ಮಾಡಿಸಿದ್ದಾರೆ.
ನೇಹಾ ಫೋಟೋಗಳನ್ನು ನೋಡುವಾಗ ರಾಜ ರವಿವರ್ಮ ಬಿಡಿಸಿದ ಚಿತ್ರದಂತೆಯೇ ಕಾಣಿಸುತ್ತದೆ. ಪಾರಿವಾಳದ ಜೊತೆ ಆಟ ಆಡುತ್ತಿರುವಂತೆ ಪೋಸ್ ನೀಡಿರುವ ನೇಹಾ ರಾಮಕೃಷ್ಣ ಈ ಫೋಟೋಗಳನ್ನೆಲ್ಲಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. "ಇದು ನಾನೋ ಅಥವಾ ಚಿತ್ರವೋ ಎಂದು ತಿಳಿಯಲು ನನಗೆ ನಾನೇ ಚಿವುಟಿಕೊಂಡೆ. ಕಲಾವಿದ ರವಿವರ್ಮ ಬಹುಶ: ನನ್ನನ್ನು ನೋಡಿದ್ದರು ಎನ್ನಿಸುತ್ತಿದೆ" ಎಂದು ನೇಹಾ ಬರೆದುಕೊಂಡಿದ್ದಾರೆ.
ಈ ಚಿತ್ರಗಳು ಫೋಟೋಗ್ರಾಫರ್ ಜಿ. ವೆಂಕಟ್ ರಾಮ್ ಅವರು ರೂಪಿಸಿದ್ದ 2020ರ ಕ್ಯಾಲೆಂಡರ್ ಫೊಟೋಗಳನ್ನು ನೆನಪಿಸುತ್ತದೆ. ತೆಲುಗು, ತಮಿಳು ನಟಿಯರನ್ನು ಬಳಸಿಕೊಂಡು ರಾಜ ರವಿವರ್ಮನ ಚಿತ್ರಗಳಂತೆ ವೆಂಕಟ್ ರಾಮ್ ಫೋಟೋಶೂಟ್ ಮಾಡಿದ್ದರು. ಈ ಫೊಟೋಗಳು ಬಹಳ ವೈರಲ್ ಆಗಿದ್ದವು. ಇದೀಗ ಅದೇ ಪರಿಕಲ್ಪನೆಯಲ್ಲಿ ಪೋಟೋಶೂಟ್ ಮಾಡಿಸಿರುವ ನೇಹಾ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಬೇಕು ಎಂದುಕೊಂಡಿದ್ದೆ. ಆಗ ನನಗೆ ನೆನಪಾಗಿದ್ದೇ ರವಿವರ್ಮನ ಚಿತ್ರಗಳು. ಒಟ್ಟಿನಲ್ಲಿ ಈ ಫೋಟೋಶೂಟ್ ಮಾಡಿಸುವ ಮೂಲಕ ನಾನು ಬಹಳ ಖುಷಿಯಾಗಿದ್ದೇನೆ ಎಂದು ನೇಹಾ ಅಭಿಮಾನಿಗಳೊಂದಿಗೆ ಸಂತೋಷ ಹಂಚಿಕೊಂಡಿದ್ದಾರೆ.
ನೇಹಾ ಇತ್ತೀಚೆಗೆ ಲಕ್ಷ್ಮಿ ಬಾರಮ್ಮ ಧಾರಾವಾಹಿ ಹಾಗೂ ಇತರ ಕಿರುತೆರೆ ಕಲಾವಿದರೊಂದಿಗೆ ಚಾರಣ ಹೋಗಿ ಅಲ್ಲಿ ಸಖತ್ ಎಂಜಾಯ್ ಮಾಡಿದ್ದರು. ಕಳೆದ 2 ದಿನಗಳಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನೇಹಾ ಈಗ ಫೊಟೋಶೂಟ್ ಮಾಡಿಸಿ ಬಹಳ ಖುಷಿಯಲ್ಲಿದ್ದಾರೆ.