ತಮ್ಮದೇ ವಿಭಿನ್ನ ಹಾಸ್ಯ, ಮ್ಯಾನರಿಸಂ ಮೂಲಕ ಸಾಕಷ್ಟು ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ನವೀನ್ ಡಿ. ಪಡೀಲ್ ಮತ್ತೆ ಮಜಾ ಟಾಕೀಸ್ ಸೀಸನ್-3ರಲ್ಲೂ ವೀಕ್ಷಕರನ್ನು ನಕ್ಕು ನಲಿಸುತ್ತಿದ್ದಾರೆ.
ಮಜಾ ಟಾಕೀಸ್ ಸೀಸನ್-3 ರಲ್ಲೂ ಮೋಡಿ ಮಾಡುತ್ತಿರುವ ನವೀನ್ ಡಿ. ಪಡೀಲ್ - Tulu comedy actor Naveen padil
ತುಳು ಚಿತ್ರರಂಗದ ಖ್ಯಾತ ಹಾಸ್ಯ ನಟ ನವೀನ್ ಡಿ. ಪಡೀಲ್ ಮಜಾ ಟಾಕೀಸ್ನ ಮೊದಲೆರಡು ಸೀಸನ್ಗಳಲ್ಲಿ ಭಾಗವಹಿಸಿದ್ದರು. ಇದೀಗ ಸೀಸನ್ 3 ರಲ್ಲಿ ಕೂಡಾ ಅವರು ಪ್ರೇಕ್ಷಕರಿಗೆ ಮನರಂಜನೆ ನೀಡಲು ಬಂದಿದ್ದಾರೆ.
ಸೃಜನ್ ಲೋಕೇಶ್ ಸಾರಥ್ಯದ ಮಜಾ ಟಾಕೀಸ್ನಲ್ಲಿ ಗುಂಡು ಮಾವನಾಗಿ ನಟಿಸುತ್ತಿರುವ ನವೀನ್ ಡಿ. ಪಡೀಲ್ ಸೀಸನ್ 3ರಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 'ತುಳು ಸಿನಿಮಾಗಳೊಂದಿಗೆ ಕೆಲವೊಂದು ಕನ್ನಡ ಸಿನಿಮಾಗಳಲ್ಲೂ ಬಣ್ಣ ಹಚ್ಚಿರುವ ನಾನು, ಇಂದು ಕನ್ನಡ ಕಿರುತೆರೆ ಮೂಲಕವೂ ಮನೆ ಮಾತಾಗಿದ್ದೇನೆ ಎಂದರೆ ಅದಕ್ಕೆ 'ಮಜಾ ಟಾಕೀಸ್' ಕಾರಣ. ಮಜಾ ಟಾಕೀಸ್ ಮೊದಲೆರಡು ಸೀಸನ್ಗಳಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಿರಲಿಲ್ಲ. ಆದರೂ ನನ್ನ ಕೈಲಾದ ಮಟ್ಟಿಗೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನು ನೀಡಿದ್ದೆ. ಈಗ ಮಜಾ ಟಾಕೀಸ್ ಸೀಸನ್ 3 ಆರಂಭವಾಗಿದ್ದು ಇಲ್ಲೂ ನನಗೆ ಸೃಜನ್ ಲೋಕೇಶ್ ಆಹ್ವಾನ ನೀಡಿರುವುದು ಬಹಳ ಖುಷಿಯಾಗಿದೆ' ಎನ್ನುತ್ತಾರೆ ನವೀನ್ ಡಿ. ಪಡೀಲ್.
'ಮಜಾ ಟಾಕೀಸ್ನಲ್ಲಿ ನನ್ನ ಪಾತ್ರಕ್ಕೆ ಹಾಗೂ ಮಂಗಳೂರು ಭಾಷೆಗೆ ಎಲ್ಲರೂ ಪ್ರೋತ್ಸಾಹ ನೀಡುತ್ತಿದ್ದಾರೆ. ಕಲಾವಿದರಿಗೆ ಇದಕ್ಕಿಂತ ಖುಷಿಯ ವಿಚಾರ ಬೇರೆ ಯಾವುದೂ ಇಲ್ಲ. ಈ ಬಾರಿ ಶೂಟಿಂಗ್ ವೇಳೆ ಲೈವ್ ಪ್ರೇಕ್ಷಕರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದರೆ ಕೊರೊನಾ ಭೀತಿ ಸಮಯದಲ್ಲಿ ಸುರಕ್ಷತೆ ದೃಷ್ಟಿಯಿಂದ ಪ್ರೇಕ್ಷಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಒಳ್ಳೆಯದು' ಎಂದು ನವೀನ್ ಡಿ. ಪಡೀಲ್ ಹೇಳಿದ್ದಾರೆ.