ಪ್ರೇಕ್ಷಕರ ಮನೆಗಳಿಂದ ಚಿತ್ರಮಂದಿರಗಳಿಗೆ ಹೋಗುವಷ್ಟು ಸುಲಭವಾಗಿ ಮುಂದಿನ ನಿಲ್ದಾಣ ಸಿನಿಮಾದ ನಿರೂಪಣೆ ಅರ್ಥವಾಗುತ್ತದೆ. ಕೆಲವು ಅನಿವಾಸಿ ಭಾರತೀಯರು ಸೇರಿಕೊಂಡು ವಿನಯ್ ಭಾರದ್ವಾಜ್ ನಿರ್ದೇಶನದಲ್ಲಿ ತಯಾರಿಸಿರುವ ಈ ಚಿತ್ರಕ್ಕೆ ಮೊದಲ ಅಂಕ ಸಿಗುವುದೇ ನವಿರಾದ, ತಂಪಾದ ಶೈಲಿಯಲ್ಲಿ ನಿರೂಪಣೆಯನ್ನು ಒಗ್ಗಿಸಿಕೊಂಡು ಹೇಳಿರುವುದರಿಂದ. ವಿನಯ್ ಭಾರದ್ವಾಜ್ ಸಹ ವಿದೇಶದಲ್ಲಿ ಬ್ಯಾಂಕ್ ಉದ್ಯಮದಲ್ಲಿ ಇದ್ದು ಹಲವಾರು ಟಾಕ್ ಶೋ ಸಹ ನಿರೂಪಣೆ ಮಾಡಿದವರು.
ಕಥೆಯ ನಿರೂಪಣೆಯಲ್ಲಿ ಅವರು ‘ನಿಲ್ದಾಣವನ್ನು’ ನಾಯಕನ ಜೀವನದಲ್ಲಿ ಬದಲಿಸುತ್ತಾ ಹೋಗುತ್ತಾರೆ. ಆದರೆ ಕಥೆ ಹೇಳಿರುವ ಶೈಲಿ ಇದೆಯಲ್ಲ ಅದು ಮುಲಾಜಿಲ್ಲದೆ ಕುಳಿತು ಸಿನಿಮಾವನ್ನು ನೋಡುವಂತೆ ಮಾಡಿದೆ. ಒಂದು ಚಿತ್ರ ಪ್ರದರ್ಶನದಲ್ಲಿ ಸಂದರ್ಶನ ಕೊಡುವುದರಿಂದ ಪ್ರಾರಂಭ ಆಗುವ ಸಿನಿಮಾ ನಾಯಕ ಪಾರ್ಥ (ಪ್ರವೀಣ್ ತೇಜ್) ಜೀವನದ ಪುಟಗಳನ್ನು ತೆರೆದಿಡುತ್ತದೆ. ಅವನ ಜೀವನದಲ್ಲಿ ನಿಲ್ದಾಣ ಸಹ ಆಗಾಗ್ಗೆ ಬದಲಾಗುತ್ತ ಹೋಗುವುದು ಚಿತ್ರದಲ್ಲಿ ಕಾಣಸಿಗುತ್ತದೆ.
ಪಾರ್ಥ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದಾಗ ಮೀರಾ (ರಾಧಿಕ ನಾರಾಯಣ್) ಪರಿಚಯ, ಸ್ನೇಹಕ್ಕೆ ತಿರುಗುತ್ತದೆ. ಆ ಸ್ನೇಹದಿಂದಲೇ ಮೀರಾ ನನ್ನನ್ನು ಮದುವೆ ಆಗು ಎಂದು ಪಾರ್ಥನನ್ನು ಕೇಳಿದಾಗ ಸಿನಿಮಾಗೆ ತಿರಿವು ಸಿಗುತ್ತದೆ. ಅಲ್ಲಿಂದ ಪಾರ್ಥನ ಜೀವನದಲ್ಲಿ ಡಾಕ್ಟರ್ ಅಹನಾ (ಅನನ್ಯ ಕಶ್ಯಪ್) ಆಗಮನ ಆಗುತ್ತದೆ. ಈಗ ಪಾರ್ಥ ಅಹನಾಳ ಮುಂದೆ ಪ್ರೇಮ ಪ್ರಸ್ತಾಪ ಇಡುತ್ತಾನೆ. ಅಲ್ಲಿಗೆ ಪ್ರೇಕ್ಷಕರಿಗೆ ಕೊಂಚ ನಿರಾಸೆ ಉಂಟಾಗುತ್ತದೆ. ಅತ್ತ ಕಡೆ ಅಹನಾ ಒಂದು ನಿರ್ಧಾರ ತೆಗೆದುಕೊಳ್ಳಲು ಅವಳಿಗೆ ಮೀರಾ ಸಂಪರ್ಕ ಬೆಳೆದಿರುತ್ತದೆ. ಇಲ್ಲಿರುವುದು ಮತ್ತೊಂದು ತಿರುವು.
ಈ ಅಹನಾ ಹಾಗೂ ಮೀರಾ ಜೊತೆಗಿನ ಬಾಂಧವ್ಯ ಮತ್ತೆ ಪಾರ್ಥ ಹಾಗೂ ಮೀರಾ ಹತ್ತಿರ ಆಗುವಂತೆ ಮಾಡುತ್ತದೆ. ಕೊನೆಗೆ ಎಲ್ಲರ ನಿಲ್ದಾಣ ಜೀವನದಲ್ಲಿ ಯಾವುದು? ಮೀರಾಗೆ ಈಗ ಪಾರ್ಥ ಮದುವೆ ಆಗಲು ಇಟ್ಟ ವಿನಂತಿಯನ್ನು ಅವಳು ಸ್ವೀಕಾರ ಮಾಡಿದಳೇ...ಇದಕ್ಕೆಲ್ಲ ಉತ್ತರ ನೀವು ಚಿತ್ರಮಂದಿರದಲ್ಲಿ ಪಡೆದುಕೊಳ್ಳಬಹುದು.