ಭಾರತೀಯ ಸಂಪ್ರದಾಯವನ್ನು ಎತ್ತಿಹಿಡಿಯುವ 'ಎಥ್‍ನಿಕ್' ಸುತ್ತಿನಲ್ಲಿ ರೂಪದರ್ಶಿಯರು ಱಂಪ್ ಮೇಲೆ ಹೆಜ್ಜೆ ಹಾಕಿದರು. ವಿಭಿನ್ನ ರೀತಿಯಲ್ಲಿ ಸೀರೆಯನ್ನು ಧರಿಸಿ ವಿನೂತನ ಫ್ಯಾಷನ್ ಮಂತ್ರ ಜಪಿಸಿದರು. ಇದು ಮದುವೆಯಾಗದ ಯುವತಿಯರಿಗಲ್ಲ. ಬದಲಾಗಿ ಇಲ್ಲೆಲ್ಲ ಇದ್ದವರು ಮದುವೆಯಾಗಿ ಮಕ್ಕಳಾದ ತಾಯಂದಿರು ಮಾತ್ರ.
ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್ಫುಲ್ ಹೋಟೆಲ್ ಲಲಿತ್ ಅಶೋಕ್‍ನಲ್ಲಿ ನಡೆದ ಮೂರನೇ ಆವೃತ್ತಿಯ ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್ ಫುಲ್‍ನಲ್ಲಿ ಒಟ್ಟು 21 ಸ್ಪರ್ಧಿಗಳು ಭಾಗಿಯಾಗಿದ್ದರು. ಇದು 'ಕಲರ್ಸ್' ತಂಡದ ನೃತ್ಯ ಕಾರ್ಯಕ್ರಮಕ್ಕೆ ರಂಗು ಹೆಚ್ಚಿಸಿತು.
ಮಿಸೆಸ್ ಸೌತ್ ಇಂಡಿಯಾ ಆಮ್ ಪವರ್ಫುಲ್ ಕಾರ್ಯಕ್ರಮ ಕೇವಲ ಸೌಂದರ್ಯದ ಆಧಾರದ ಮೇಲೆ ಸ್ಪರ್ಧಿಗಳನ್ನು ಆಯ್ಕೆ ಮಾಡುವುದಿಲ್ಲ. ಬದಲಾಗಿ ಇಲ್ಲಿ ಸ್ಪರ್ಧಿಗಳು ಪ್ರಶ್ನೋತ್ತರ ಸುತ್ತಿನಲ್ಲೂ ಭಾಗವಹಿಸಬೇಕು.
ತೆಳ್ಳಗೆ ಬೆಳ್ಳಗೆ ಇದ್ದರಷ್ಟೇ ಅದು ಸೌಂದರ್ಯ ಎನ್ನುವ ಮಾತು ಇವತ್ತಿಗೆ ಅನ್ವಯಿಸುವುದಿಲ್ಲ. ಮಿಸೆಸ್ ಕರ್ವಿ ಕರ್ನಾಟಕ ಸುತ್ತಿನಲ್ಲಿ ರೂಪದರ್ಶಿಯರು ಈ ಎಲ್ಲಾ ಸಿದ್ಧ ಮಾದರಿಯನ್ನು ಮೀರಿದಂತೆ ತಮ್ಮ ಱಂಪ್ ವಾಕ್‍ನಲ್ಲಿ ಭಾಗಿಯಾದರು. ಮಿಸೆಸ್ ಕರ್ನಾಟಕ, ಮಿಸೆಸ್ ತಮಿಳುನಾಡು, ಮಿಸೆಸ್ ಆಂಧ್ರಪ್ರದೇಶ ಸುತ್ತಿನಲ್ಲಿ ಬೆಡಗಿಯರು ತಮ್ಮ ತಮ್ಮ ರಾಜ್ಯವನ್ನು ಪ್ರತಿನಿಧಿಸಿದರು.
ಕಾರ್ಯಕ್ರಮವನ್ನು ರಂಗಾಗಿಸುವಲ್ಲಿ ಓಡಾಡಿದ ಆಯೋಜಕಿ ನಂದಿನಿ ನಾಗರಾಜ್ ಸ್ಪರ್ಧೆಯ ಕುರಿತು ಮಾತನಾಡಿದರು. "ಇಲ್ಲಿ ಗೆದ್ದವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ. ಗೋವಾದಲ್ಲಿ ನಡೆಯುವ ಮಿಸೆಸ್ ಇಂಡಿಯಾ ಆಮ್ ಪವರ್ಫುಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿ ಆಯ್ಕೆಯಾದ ಸ್ಪರ್ಧಿಗಳು ಸಿಂಗಪುರದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ' ಎಂದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಜಯರಾಮ್ ಕಾರ್ತಿಕ್(ಜೆಕೆ), "ಸೌಂದರ್ಯವನ್ನು ಅಳೆಯುವುದಕ್ಕೆ ಯಾವುದೇ ಸಾಧನ ಇಲ್ಲ. ಆದರೆ ಮಿಸೆಸ್ ಸೌತ್ ಇಂಡಿಯಾದಂತಹ ಸ್ಪರ್ಧೆಗಳು ಬದುಕಿಗೆ ಭರವಸೆ ಮೂಡಿಸುತ್ತವೆ. ಉತ್ಸಾಹ ತುಂಬುತ್ತವೆ. ಇಲ್ಲಿ ಭಾಗವಹಿಸಿ ನನಗೆ ಖುಷಿಯಾಯಿತು' ಎಂದು ಸಂತಸ ಹಂಚಿಕೊಂಡರು.
ವಿಜೇತರಾದವರಿಗೆ ನಂದಿನಿ ನಾಗರಾಜ್ ಅವರು ಕ್ರೌನ್ ತೊಡಿಸಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಪ್ನಾ ಸಾವಂತ್, ಶ್ವೇತಾ ನಿರಂಜನ್, ಸವಿತಾ ದೇವರಾಜ್ ರೆಡ್ಡಿ, ಗಾಯತ್ರಿ ಮೊಹಂತಿ ಭಾಗವಹಿಸಿದ್ದರು. ಕೊರೊನಾ ಸಮಯದಲ್ಲಿ ನಿಂತುಹೋಗಿದ್ದ ಕಾರ್ಯಕ್ರಮಗಳು ಇದೀಗ ಒಂದೊಂದಾಗಿ ಆರಂಭಗೊಳ್ಳುತ್ತಿದೆ. ಈ ಮೂಲಕ ಮತ್ತೆ ಸಹಜ ಸ್ಥಿತಿಯತ್ತ ಜನರು ಕೂಡ ಮರಳುತ್ತಿದ್ದಾರೆ ಎನ್ನಬಹುದು.