ಒಂದು ಕಡೆ ಚಿನ್ನದ ಬೆಲೆ ಗಗನಕ್ಕೆ ಏರಿದೆ, ಕೆಲವರು ಚಿನ್ನ ಕಡಿಮೆ ಇರುವಾಗ ಕಷ್ಟಕ್ಕೆ ಆಗುತ್ತದೆ ಎಂದು ಜೋಪಾನವಾಗಿ ತೆಗೆದಿರಿಸುತ್ತಾರೆ. ಈ ನಡುವೆ ಖ್ಯಾತ ನಟ-ನಟಿಯರೆಲ್ಲಾ ಚಿನ್ನ ಮಾರಿಬಿಡಿ ಎಂದು ಜನರಿಗೆ ಹೇಳುತ್ತಿದ್ದಾರೆ.
ಮತ್ತೆ ಕೆಲವರು ಇದೇ ಕಂಪನಿಯ ಸ್ಟೀಲ್ ಖರೀದಿಸಿ ಎನ್ನುತ್ತಿದ್ದಾರೆ. ಅಂದಹಾಗೆ ಇವರೆಲ್ಲಾ ಜಾಹೀರಾತಿನಲ್ಲಿ ಈ ಡೈಲಾಗ್ ಹೇಳುತ್ತಿದ್ದಾರೆ. ನೀವು ಸುಮಾರು 1 ಗಂಟೆ ಕಾಲ ಟಿವಿ ನೋಡಿದರೆ ಸಾಕು ಆ ನಡುವೆ ಬರುವ ಜಾಹೀರಾತುಗಳಲೆಲ್ಲಾ ಖ್ಯಾತ ನಟ-ನಟಿಯರು ವಿವಿಧ ಕಂಪನಿಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಾರೆ.
ಮೊದಲಿಗೆ ತಮನ್ನಾ ಭಾಟಿಯಾ. ಗಿಡಗಳಿಗೆ ನೀರು ಹಾಕುತ್ತಾ ನಿಮ್ಮ ಚಿನ್ನದ ಒಡವೆ ಅಡ ಇಟ್ಟಿದ್ದೀರಾ ಎಂದು ಪ್ರಶ್ನಿಸುತ್ತಾರೆ. ನಂತರ ಯುವ ಜೋಡಿಗಳಿಬ್ಬರು ಚಿನ್ನದ ಒಡವೆ ಅಡ ಇಟ್ಟರೆ ಒಂದು ಗಿಫ್ಟ್ ಕೂಪನ್ ಸಿಗಲಿದೆ ಎನ್ನುತ್ತಾರೆ. ನಂತರ ಸುಧಾರಾಣಿ ಆಗಮನ, ಇವರಾದ ನಂತರ ಅನು ಮುಖರ್ಜಿ. ಮುಂದಿನ ಸರದಿ ವಿನಯಾ ಪ್ರಸಾದ್ ಬಂದು ನಿಮ್ಮ ಬಂಗಾರವನ್ನು ಮಾರಿ ಹಣ ಪಡೆಯುಲು ಸೂಕ್ತ ಜಾಗವೊಂದರ ಬಗ್ಗೆ ಹೇಳುತ್ತಾರೆ. ಇವರು ಮಾತ್ರವಲ್ಲ ಹಿರಿಯ ನಟಿ ಸುಹಾಸಿನಿ ಕೂಡಾ ಚಿನ್ನದ ಆಭರಣಗಳ ಬಗ್ಗೆ ಮಾತನಾಡುತ್ತಾ ಬರುತ್ತಾರೆ.
ಇವರೆಲ್ಲಾ ಚಿನ್ನ ಮಾರಿಬಿಡಿ ಎಂದರೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಯಾವುದೀ ಹೊಸ ಪರಿಮಳ ಎನ್ನುತ್ತಾ ಅಗರಬತ್ತಿ ಜಾಹೀರಾತಿನ ಬಗ್ಗೆ ಗಮನ ಸೆಳೆಯುತ್ತಾರೆ. ನಾವೂ ಕೂಡಾ ಇದ್ಧೇನೆ ಎಂದು ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಕಿಂಗ್ ಸ್ಟಾರ್ ಯಶ್ ಸ್ಟೀಲ್ ಕಂಪನಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ಒಟ್ಟಿನಲ್ಲಿ ಈ ನಟ-ನಟಿಯರೆಲ್ಲಾ ಆ್ಯಕ್ಟಿಂಗ್ ಮಾತ್ರವಲ್ಲ, ಜಾಹೀರಾತಿನ ಮೂಲಕ ಕೂಡಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ ಎನ್ನವುದಕ್ಕೆ ಈ ಜಾಹೀರಾತುಗಳೇ ಸಾಕ್ಷಿ.