ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಿಥುನ ರಾಶಿ' ಧಾರಾವಾಹಿಯಲ್ಲಿ ನಾಯಕಿ ರಾಶಿ ತಮ್ಮ ಅಭಿನಯದಿಂದ ಈಗಾಗಲೇ ಕಿರುತೆರೆ ವೀಕ್ಷಕರಿಗೆ ಪರಿಚಯವಾಗಿದ್ದಾರೆ. ಈಗೆ ಹೆಸರು ವೈಷ್ಣವಿ.
ಮೊದಲಿನಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ವೈಷ್ಣವಿ 'ಶಾಲಿನಿ ಐಪಿಎಸ್' ಚಿತ್ರದಲ್ಲಿ ಮೊದಲ ಬಾರಿ ಆ್ಯಕ್ಟಿಂಗ್ ಆರಂಭಿಸಿದರು. ನಂತರ ಕುಲದೀಪ್ ಅವರ 'ಧೂಮ' ಎಂಬ ಕಿರುಚಿತ್ರದಲ್ಲಿ ನಟಿಸಿದರು. ವಿನೋದ್ ವಿ. ಧೋಂಡಾಳೆ ನಿರ್ದೇಶನದ 'ಶಾಂತಂ ಪಾಪಂ' ಧಾರಾವಾಹಿಯಲ್ಲಿ ಬಣ್ಣ ಹಚ್ಚುವ ಮೂಲಕ ಕಿರುತೆರೆ ಲೋಕಕ್ಕೆ ಬಂದಿರುವ ವೈಷ್ಣವಿ ಸದ್ಯ ರಾಶಿ ಆಗಿ ಬದಲಾಗಿದ್ದಾರೆ.
ಮಿಥುನ ರಾಶಿ ಧಾರಾವಾಹಿಯ ರಾಶಿ ಚಿಕ್ಕ ಪುಟ್ಟ ವಿಷಯಗಳಲ್ಲಿ ಸಂತೋಷ ಪಡೆಯುವ ರಾಶಿ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಿರುತ್ತಾಳೆ. ಸಣ್ಣ ಪ್ರಾಯದಲ್ಲಿಯೇ ಮನೆಯ ಜವಾಬ್ದಾರಿ ಹೊತ್ತುಕೊಳ್ಳುವ ಈಕೆ ಮನೆಯನ್ನು ನೋಡಿಕೊಳ್ಳುವ ಸಲುವಾಗಿ ಆಟೋ ಓಡಿಸುತ್ತಿರುತ್ತಾಳೆ. ಆಟೋ ರಾಜ ಶಂಕರ್ ನಾಗ್ ಕಟ್ಟಾ ಅಭಿಮಾನಿಯಾಗಿರುವ ರಾಶಿ ಎಲ್ಲರನ್ನೂ ನಂಬುತ್ತಾಳೆ. ಮಾತ್ರವಲ್ಲ ಆಕೆಗೆ ಮೋಸ, ಕಪಟ ಎಂದರೆ ಏನು ಎಂದು ತಿಳಿದಿರುವುದಿಲ್ಲ.
ರಾಶಿ ಪಾತ್ರಕ್ಕಾಗಿ ಆಟೋ ಓಡಿಸುವುದನ್ನು ಕಲಿತ ನಟಿ ರಾಶಿಯಾಗಿ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ವೈಷ್ಣವಿ, ಎಲ್ಲಿ ಹೋದರೂ ರಾಶಿ ಎಂದೇ ಜನರು ಗುರುತಿಸುತ್ತಾರಂತೆ. 'ಮಿಥುನ ರಾಶಿ'ಯ ರಾಶಿ ಪಾತ್ರ ನನಗೆ ಸಾಕಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಮಾತ್ರವಲ್ಲ ಇದೇ ಮೊದಲ ಬಾರಿಗೆ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ತುಂಬಾನೇ ಖುಷಿಯಾಗಿದೆ. ರಾಶಿ ಪಾತ್ರಕ್ಕಾಗಿ ನಾನು ಆಟೋ ಓಡಿಸುವುದನ್ನು ಕೂಡಾ ಕಲಿತುಕೊಂಡೆ ಎನ್ನುತ್ತಾರೆ ವೈಷ್ಣವಿ.
ಸಿನಿಮಾದಲ್ಲೂ ನಟಿಸಿರುವ ವೈಷ್ಣವಿ ರಾಶಿ ನಟನಾ ಕ್ಷೇತ್ರಕ್ಕೆ ಬಂದಿದ್ದರೂ ಓದುವುದನ್ನು ಮರೆತಿಲ್ಲ. ನಟನೆಯ ಜೊತೆಗೆ ಓದನ್ನು ಕೂಡಾ ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿದ್ದೇನೆ ಎನ್ನುತ್ತಾರೆ ವೈಷ್ಣವಿ. ನನಗೆ ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಿಗೆ ಜೀವ ತುಂಬುವ ಮಹಾದಾಸೆಯಿದೆ. ನಾನು ಆ್ಯಕ್ಟಿಂಗ್ ಕ್ಷೇತ್ರಕ್ಕೆ ಬಂದ ಬಳಿಕ ಸಾಕಷ್ಟು ವಿಚಾರಗಳನ್ನು ಕಲಿತೆ. ನಟನೆಯ ರೀತಿ ನೀತಿಗಳನ್ನು ತಿಳಿದುಕೊಂಡೆ ಎನ್ನುವ ವೈಷ್ಣವಿ, ಜನರು ಆಕೆಯನ್ನು ಗುರುತಿಸಿದಾಗ ಬಹಳ ಸಂತೋಷವಾಗುತ್ತದೆ ಎನ್ನುತ್ತಾರೆ.