ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇವಳು ಸುಜಾತಾ ಸೀರಿಯಲ್ನಲ್ಲಿ ಸುಜಾತಾ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಮೇಘಶ್ರೀ ಮತ್ತೆ ಮರಳಿ ಬರುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ ನಂದಿನಿ ಸೀಕ್ವೆಲ್ ಆರಂಭವಾಗುತ್ತಿದ್ದು, ಅದರಲ್ಲಿ ನಾಯಕಿಯಾಗಿ ಮೇಘಶ್ರೀ ಕಾಣಿಸಿಕೊಳ್ಳಲಿದ್ದಾರೆ.
ಖುಷ್ಬೂ ನಿರ್ಮಾಣದಲ್ಲಿ ನಂದಿನಿ 2 ಧಾರಾವಾಹಿ ಆರಂಭವಾಗಲಿದ್ದು, ಅದರಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಗಕನ್ನಿಕೆ' ಧಾರಾವಾಹಿಯಲ್ಲಿ ನಾಗಿಣಿ ಶೇಷ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಮೇಘಶ್ರೀ, ತದ ನಂತರ ಬೆಳ್ಳಿತೆರೆಯತ್ತ ಮುಖ ಮಾಡಿದರು. ಕದ್ದು ಮುಚ್ಚಿ, ದಶರಥ ಹಾಗೂ ಕೃಷ್ಣ ತುಳಸಿ ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಮೂಲಕ ಬೆಳ್ಳಿತೆರೆಯಲ್ಲಿಯೂ ಕಮಾಲ್ ಮಾಡಿರುವ ಮೇಘಶ್ರೀ ಮತ್ತೆ ಸುಜಾತಾಳಾಗಿ ಕಿರುತೆರೆಗೆ ಕಾಲಿಟ್ಟರು.