ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮತ್ತೆ ವಸಂತ ಧಾರಾವಾಹಿಯು ಯಶಸ್ವಿ ಮುನ್ನೂರು ಸಂಚಿಕೆಗಳನ್ನು ಪೂರೈಸಿದೆ. ಇದಕ್ಕೆಲ್ಲಾ ಜನರು ಆಶೀರ್ವಾದ ಹಾಗೂ ಪ್ರೀತಿ, ಬೆಂಬಲ ಕಾರಣ.
ಇದೇ ಪ್ರೀತಿ ಆಶೀರ್ವಾದ ಹೀಗೆ ಇರಲಿ, ಇನ್ನಷ್ಟು ಸಂಚಿಕೆಗಳನ್ನು ಪೂರೈಸಲು ನೀವು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ ವಸಂತ ಪಾತ್ರಧಾರಿ ರಕ್ಷಿತ್ ಅರಸ್ ಗೋಪಾಲ್.
ಎಲ್ಲವೂ ಅನ್‌ಲಾಕ್ ಆಗಿತ್ತು, ನಾನು ಮಾಡುತ್ತಿದ್ದ ಪ್ರಾಜೆಕ್ಟ್ ಅಂತ್ಯಗೊಂಡಿತ್ತು. ಆಡಿಷನ್ಸ್‌ನಲ್ಲಿ ಭಾಗವಹಿಸುತ್ತಿದ್ದೆ. ಶೂಟಿಂಗ್‌ಗೆ ಅನುಮತಿ ಸಿಕ್ಕಿತ್ತು ಎಂದು ಗೊತ್ತಾದಾಗ ಸಿಕ್ಕಿದ್ದು ಮತ್ತೆ ವಸಂತ.
ಇದರ ಪಯಣ ದಿನವೂ ಹಬ್ಬವಾಗಿತ್ತು. ತರಾತುರಿಯಲ್ಲಿ ಓಡಾಡುತ್ತಿದ್ದೆವು. ಇದಕ್ಕೆ ಕಾರಣ ನಮ್ಮ ನಿರ್ದೇಶಕ ರಾಜೇಶ್ ಮಾವಳ್ಳಿ ಸರ್. ನಾನು ಹಿಂದೆ ನಿರ್ವಹಿಸಿದ ಪಾತ್ರಗಳಿಗಿಂತ ಇದು ವಿಭಿನ್ನ. ವಸಂತ ಪಾತ್ರ ತುಂಬಾ ಖುಷಿ ಕೊಟ್ಟಿದೆ.
ರೌಡಿ ಗ್ಯಾಂಗ್ ಸ್ಟಾರ್ ಪಾತ್ರ. ಹೀರೊ ಶೇಡ್ ಕೂಡ ಇದೆ. ಹಿಂದೆ ಸಾಫ್ಟ್, ವಿಲನ್ ಶೇಡ್ ಇರೋ ಪಾತ್ರ ಮಾಡಿದ್ದೆ. ಇದರಲ್ಲಿ ಭಾವನೆಗಳ ಮಿಶ್ರಣ ಇದೆ ಎಂದು ಹೇಳಿದ್ದಾರೆ.
ಮಹಾದೇವಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ರಕ್ಷಿತ್ ಗೋಪಾಲ್ ಅರಸ್ ಅವರಿಗೆ ಹೆಸರು ತಂದುಕೊಟ್ಟಿದ್ದು ಧೀರಜ್ ಪಾತ್ರ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧೀರಜ್ ಪಾತ್ರ ರಕ್ಷಿತ್ ಅವರಿಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತ್ತು.
ಮುಂದೆ ಯಜಮಾನಿ ಧಾರಾವಾಹಿಯಲ್ಲಿ ನಟಿಸಿದ್ದ ಇವರು ಸದ್ಯ ಮತ್ತೆ ವಸಂತ ಧಾರಾವಾಹಿಯ ವಸಂತ ಆಗಿ ಮೋಡಿ ಮಾಡುತ್ತಿದ್ದಾರೆ.