ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯ ಬ್ಯೂಟಿಫುಲ್ ವಿಲನ್ ಅನುಷ್ಕಾ ಅಭಿನಯಕ್ಕೆ ಮನಸೋಲದವರಿಲ್ಲ. ಕಿರುತೆರೆಯ ಮೋಸ್ಟ್ ಪ್ರೆಟಿ ವಿಲನ್ ಎಂದೇ ಮನೆ ಮಾತಾಗಿರುವ ಮಾನ್ಸಿ ಜೋಷಿ ನಟನಾ ಯಾನ ಆರಂಭಿಸಿದ್ದು ನೆಗೆಟಿವ್ ರೋಲ್ ಮೂಲಕ.
ಪಾತ್ರ ಯಾವುದಾದರೂ ಸರಿ, ಒಟ್ಟಿನಲ್ಲಿ ಜನ ಗುರುತಿಸಿದರೆ ಸಾಕು ಎಂದು ಕನಸು ಕಂಡಿದ್ದ ಮಾನ್ಸಿಗೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕನ ತಂಗಿ ಅನ್ವಿತಾ ಆಗಿ ನಟಿಸಲು ಅವಕಾಶ ಸಿಕ್ಕಿತ್ತು.
ನಂತ್ರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಯಕಿ' ಧಾರಾವಾಹಿಯಲ್ಲಿ ಸೌಜನ್ಯ ಆಲಿಯಾಸ್ ಪಿಂಕಿ ಪಾತ್ರಕ್ಕೆ ಜೀವ ತುಂಬುತ್ತಿರುವ ಮಾನ್ಸಿ, ಅಲ್ಲೂ ನೆಗೆಟಿವ್ ರೋಲ್ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಪಾರು ಮತ್ತು ನಾಯಕಿ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವ ಮಾನ್ಸಿಯನ್ನು ದೂರದ ತಮಿಳು ಕಿರುತೆರೆ ಕೈಬೀಸಿ ಕರೆದಿದೆ.
ಕನ್ನಡದಿಂದ ತಮಿಳು ಕಿರುತೆರೆಗೆ ಜಿಗಿದ ಪ್ರೆಟಿ ವಿಲನ್ ತಮಿಳಿನ 'ಅನ್ಬುಡನ್ ಖುಷಿ' ಧಾರಾವಾಹಿಯಲ್ಲಿ ಖುಷಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಈಗಾಗಲೇ ಕನ್ನಡ ಭಾಷೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮಾನ್ಸಿ ಇದೀಗ ಪರಭಾಷೆಯಲ್ಲೂ ತಮ್ಮ ನಟನಾ ಛಾಪು ಮೂಡಿಸಲು ತಯಾರಾಗಿದ್ದಾರೆ.