'ಮಂಗಳಗೌರಿ ಮದುವೆ' ಧಾರಾವಾಹಿಯಲ್ಲಿ ನಾಯಕ ರಾಜೀವನ ಪ್ರೇಯಸಿ ಸ್ನೇಹ ಆಗಿ ಅಭಿನಯಿಸಿ ಮನೆ ಮಾತಾಗಿರುವ ಯಶಸ್ವಿ ಸ್ವಾಮಿ, ಇಂದು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ನಟನೆಯ ಬಗ್ಗೆ ಕಿಂಚಿತ್ತೂ ಕಲ್ಪನೆಯಿಲ್ಲದ ಯಶಸ್ವಿ ಅವರು ಇಂದು ನಟನಾ ಲೋಕದಲ್ಲಿ ಮಿಂಚಲು ಅವರ ಸಹೋದರನ ಗೆಳೆಯ ಕಾರಣವಂತೆ.
'ಮಂಗಳಗೌರಿ ಮದುವೆ' ಧಾರಾವಾಹಿ ಖ್ಯಾತಿಯ ಸ್ನೇಹ ಯಶಸ್ವಿ ಆಗ ಎಸ್ಎಸ್ಎಲ್ಸಿ ಓದುತ್ತಿದ್ದರು. ಅವರ ಸಹೋದರನ ಗೆಳೆಯನ ಬಳಿ ಧಾರಾವಾಹಿಯಲ್ಲಿ ನಟಿಸಲು ಹೊಸ ಹುಡುಗಿ ಬೇಕಿತ್ತು ಎಂದು ಪರಿಚಯದವರು ಕೇಳಿದ್ದಾರೆ. ಆಗ ಆ ಹುಡುಗ ಯಶಸ್ವಿ ಅವರ ಹೆಸರು ಹೇಳಿದ್ದಾನೆ. ಇದೇ ಈಗ ಯಶಸ್ವಿ ಬಣ್ಣದ ಲೋಕದಲ್ಲಿ ಮಿಂಚಲು ಕಾರಣ. ಅನುರೂಪ ಧಾರಾವಾಹಿ ಮೂಲಕ ಬಣ್ಣದ ಪಯಣ ಆರಂಭಿಸಿದ ಯಶಸ್ವಿ ರಾಜ ರಾಣಿಯಲ್ಲೂ ನಟಿಸಿದರು. ಇಂಚರ ವಾಹಿನಿಯಲ್ಲಿ ನಿರೂಪಕಿಯಾಗಿ ಕೂಡಾ ಕೆಲಸ ಮಾಡಿರುವ ಅವರು ಅಸಾಧ್ಯ ಅಳಿಯಂದಿರು ಧಾರಾವಾಹಿಯಲ್ಲಿ ಕಾಣಿಸಿಕೊಂಡರು.
ಕಿರುತೆರೆ ನಟಿ ಯಶಸ್ವಿ ಸ್ವಾಮಿ ಕೆಲವು ದಿನಗಳ ಕಾಲ ವಿದ್ಯಾಭ್ಯಾಸದಿಂದ ದೂರವಿದ್ದು ನಂತರ ಮತ್ತೆ ಉದಯ ವಾಹಿನಿಯ ಅವಳು ಧಾರಾವಾಹಿ ಮೂಲಕ ನಟನೆಗೆ ವಾಪಸ್ ಬಂದರು. ಈ ಧಾರಾವಾಹಿಯಲ್ಲಿ ನಾಯಕಿ ಶ್ವೇತಾ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಬರೋಬ್ಬರಿ ಒಂದು ವರ್ಷಗಳ ಕಾಲ ಶ್ವೇತಾ ಪಾತ್ರಕ್ಕೆ ಜೀವ ತುಂಬಿದ ಯಶಸ್ವಿಗೆ ಇನ್ನು ಮುಂದೆ ಯಾವುದೇ ಪಾತ್ರ ದೊರೆತರೂ ಸುಲಭವಾಗಿ ಪರಕಾಯ ಪ್ರವೇಶ ಮಾಡಬಲ್ಲೆ ಎಂಬ ನಂಬಿಕೆ ಬಂತು. ನಂತರ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿತು. ಒಂದು ಕ್ಷಣವೂ ಯೋಚಿಸದೆ ಒಪ್ಪಿದ ಯಶಸ್ವಿ, ಈಗ ರಾಜೀವನ ಪ್ರೇಯಸಿ ಸ್ನೇಹ ಆಗಿ ನಟಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ 'ಮಂಗಳಗೌರಿ ಮದುವೆ'ಯ ಭಾಗವಾಗಿರುವ ಸ್ನೇಹ, ಸದ್ಯಕ್ಕೆ ಬೇರೆ ಯಾವ ಪ್ರಾಜೆಕ್ಟ್ಗಳತ್ತ ಗಮನ ಹರಿಸಿಲ್ಲ.
10ನೇ ತರಗತಿಯಲ್ಲಿ ಬಣ್ಣದ ಪಯಣ ಆರಂಭಿಸಿದ ನಟಿ 'ಮಂಗಳ ಗೌರಿಯ ಸ್ನೇಹ ಪಾತ್ರಕ್ಕೂ ನನಗೂ ಒಂದು ರೀತಿಯ ಸಾಮ್ಯತೆ ಇದೆ. ನಾನು ಹೆಚ್ಚಿಗೆ ಮಾತನಾಡುತ್ತೇನೆ. ಈ ಪಾತ್ರವೂ ಅದೇ ರೀತಿ ಆಗಿರುವುದರಿಂದ ನನಗೆ ಕಷ್ಟ ಆಗಲಿಲ್ಲ. ಸದಾ ನಗುವ ಪಾತ್ರ ನನ್ನದು. ಈ ಪಾತ್ರ ನನಗೆ ಹೇಳಿ ಮಾಡಿಸಿದಂತೆ ಇದೆ ಎನ್ನುತ್ತಾರೆ ಯಶಸ್ವಿ. 'ಫಾರ್ಚುನರ್' ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿರುವ ಯಶಸ್ವಿ, ತೆಲುಗು ಕಿರುತೆರೆಯಲ್ಲೂ ನಟಿಸಿದ್ದಾರೆ.
ಬಣ್ಣದ ಲೋಕದಲ್ಲಿ ಯಶಸ್ವಿಯಾದ ಯಶಸ್ವಿ