ಬಾಲ್ಯದಿಂದಲೂ ನೃತ್ಯದತ್ತ ವಿಶೇಷ ಒಲವು ಹೊಂದಿದ್ದ ಮಾಳವಿಕಾ ಶಾಸ್ತ್ರೀಯ ನೃತ್ಯ ಕಲಿತಿದ್ದಾರೆ. ಕಲಾಕ್ಷೇತ್ರದ ಎಂ.ಆರ್. ಕೃಷ್ಣಮೂರ್ತಿ, ದೆಹಲಿಯ ಪದ್ಮಶ್ರೀ ಲೀಲಾ ಸಂಸನ್ ಅವರ ಬಳಿ ನೃತ್ಯ ಕಲಿತಿರುವ ಮಾಳವಿಕಾ ಸಾಕಷ್ಟು ನೃತ್ಯ ಕಾರ್ಯಕ್ರಮಗಳನ್ನು ಕೂಡಾ ನೀಡಿದ್ದಾರೆ. 'ನಕ್ಕಳಾ ರಾಜಕುಮಾರಿ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಾಳವಿಕಾ 'ಕಲ್ಯಾಣೋತ್ಸವ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಮುಂದೆ ಸಮರ, ರವಿತೇಜ, ಸೈನೈಡ್, ಮುಂಜಾನೆ, ದಶಮುಖ, ಡ್ರಾಮಾ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮೈನಾ, ಯಾರೇ ಕೂಗಾಡಲಿ, ಕರೋಡ್ಪತಿ, ಕಲ್ಯಾಣಮಸ್ತು, ಅಧ್ಯಕ್ಷ, ಮಿಸ್ಟರ್ ಅ್ಯಂಡ್ ಮಿಸಸ್ ರಾಮಾಚಾರಿ, ಮುಕುಂದ ಮುರಾರಿ, ಶಿವಲಿಂಗ, ಕೆಜಿಎಫ್ 1, ಡೇವಿಡ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಲಾಯರ್ ಪಾತ್ರಗಳಲ್ಲಿ ಮಿಂಚುತ್ತಿರುವ ಮಾಳವಿಕಾ ಅವಿನಾಶ್
ನಟಿ, ನಿರೂಪಕಿ, ರಾಜಕಾರಣಿ ಇದು ಮಾಳವಿಕಾ ಅವಿನಾಶ್ ಅವರ ಸಂಕ್ಷಿಪ್ತ ಪರಿಚಯ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಿ.ಎನ್.ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಬೆಳ್ಳಿತೆರೆ ಜೊತೆಗೆ 'ಮಾಯಾಮೃಗ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಮಾಳವಿಕಾ ಮತ್ತೆ ಮನ್ವಂತರ, ಗೃಹಭಂಗ, ಮುಕ್ತ, ಮಹಾಪರ್ವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಬದುಕು ಜಟಕಾ ಬಂಡಿ' ಎಂಬ ರಿಯಾಲಿಟಿ ಶೋ ನಿರೂಪಕಿಯಾಗಿ ಮನೆ ಮಾತಾಗಿದ್ದರು. ಮುಂದೆ 'ಆರದಿರಲಿ ಬೆಳಕು' ಕಾರ್ಯಕ್ರಮದ ನಿರೂಪಕಿಯಾಗಿದ್ದ ಇವರು ಬಿಗ್ ಬಾಸ್ ಸ್ಪರ್ಧಿಯಾಗಿಯೂ ಕಾಣಿಸಿಕೊಂಡಿದ್ದರು. ಕನ್ನಡದ ಜೊತೆಗೆ ತಮಿಳು ಕಿರುತೆರೆಯಲ್ಲಿ ನಟಿಸುವ ಮೂಲಕ ಪರಭಾಷೆಯಲ್ಲೂ ಮಿಂಚಿರುವ ಮಾಳವಿಕಾ ಎಲ್ಎಲ್ಬಿ ಪದವಿಧರೆ ಕೂಡಾ ಹೌದು. ತಮಿಳುನಾಡು ಸರ್ಕಾರ ಕೊಡುವ ಉತ್ತಮ ನಟಿ, ಕಲೈಮಾಮಣಿ, ಆರ್ಯಭಟ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಯನ್ನು ಪಡೆದಿದ್ದು ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.
ಇದೀಗ 'ಮಗಳು ಜಾನಕಿ' ಯಲ್ಲಿ ಲಾಯರ್ ಪಾತ್ರಧಾರಿಯಾಗಿ ಗಮನ ಸೆಳೆಯುತ್ತಿರುವ ಮಾಳವಿಕಾ 'ಎಲ್ಎಲ್ಬಿ ಕಲಿತಿರುವ ನನಗೆ ಪ್ರಾಕ್ಟೀಸ್ ಮಾಡಬೇಕು ಎಂದಿತ್ತು. ಬಾರ್ ಕೌನ್ಸಿಲ್ ಸದಸ್ಯೆಯಾಗಬೇಕು ಎಂದುಕೊಂಡಿದ್ದೆ. ಅದೇ ಸಮಯಕ್ಕೆ ಬಣ್ಣದ ಲೋಕದಿಂದ ಅವಕಾಶ ಬಂದಿತ್ತು. ವಿಶೇಷವೆಂದರೆ ಅಲ್ಲೂ ಲಾಯರ್ ಪಾತ್ರವೇ ದೊರೆಯಿತು. ಮಹಾಪರ್ವದಲ್ಲಿ ಜಡ್ಜ್ ಆಗಿ ಕಾಣಸಿಕೊಂಡಿದ್ದ ನನಗೆ ಮಗಳು ಜಾನಕಿಯಲ್ಲಿ ಲಾಯರ್ ಆಗಿ ನಟಸುವ ಅವಕಾಶ ಸಿಕ್ಕಿದೆ. ದೈವೇಚ್ಛೆ ಎಂದರೆ ಇದೇ ಇರಬೇಕೇನೋ' ಎನ್ನುವ ಮಾಳವಿಕಾ ಸದ್ಯ ಮಗಳು ಜಾನಕಿಯಲ್ಲಿ ಫುಲ್ ಬ್ಯುಸಿ.