ಕಿರುತೆರೆ ವೀಕ್ಷಕರಿಗೆ ಸಿಹಿಸುದ್ದಿ ಮತ್ತೆ ತೆರೆಮೇಲೆ ಬರುತ್ತಿದೆ. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಜನಪ್ರಿಯ ಶೋ ಮಜಾ ಟಾಕೀಸ್ ಸೀಸನ್ 3 ಮತ್ತೆ ಆರಂಭವಾಗುವ ಕುರಿತು ಪ್ರೋಮೊ ಬಿಡುಗಡೆ ಆಗಿದೆ.
ಮತ್ತೆ ನಕ್ಕು ನಗಿಸಲು ಬರುತ್ತಿದೆ 'ಮಜಾ ಟಾಕಿಸ್' ಟೀಂ... ಸೀಸನ್-3 ಕೊಂಚ ವಿಭಿನ್ನ - ಮಜಾ ಟಾಕಿಸ್ ಸೀಸನ್-3
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಜನಪ್ರಿಯ ಶೋ ಮಜಾ ಟಾಕೀಸ್ ಸೀಸನ್ 3 ಸದ್ಯದಲ್ಲೇ ಆರಂಭವಾಗಲಿದೆ. ಬಣ್ಣ ಹೊಸದಾಗಿದೆ ಬಂಧ ಬಿಗಿಯಾಗಿದೆ ಎಂಬ ಸಾಲುಗಳೊಂದಿಗೆ ಸೀಸನ್-3 ಪ್ರೋಮೊ ರಿಲೀಸ್ ಆಗಿದೆ.
ಕಳೆದ ಎರಡು ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿರುವ ಮಜಾ ಟಾಕೀಸ್ ಸೀಸನ್ 3 ಆರಂಭವಾಗುತ್ತಿರುವುದು ಕಿರುತೆರೆ ವೀಕ್ಷಕರ ಸಂತಸವನ್ನು ಇಮ್ಮಡಿಗೊಳಿಸಿದೆ. ಅದಾಗಲೇ ಸೀಸನ್-3 ಪ್ರೋಮೊ ರಿಲೀಸ್ ಆಗಿದ್ದು, ಬಣ್ಣ ಹೊಸದಾಗಿದೆ ಬಂಧ ಬಿಗಿಯಾಗಿದೆ ಎಂಬ ಸಾಲುಗಳೊಂದಿಗೆ ಹೊಸ ತನದ ಭರವಸೆ ಮೂಡಿಸಿದೆ. ಬರೋಬ್ಬರಿ 5 ವರ್ಷಗಳ ಕಾಲ ಪ್ರಸಾರವಾಗಿದ್ದ ಮಜಾ ಟಾಕೀಸ್ 500ನೇ ಸಂಚಿಕೆಯ ಸಂಭ್ರಮವನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡಿತ್ತು. ಇಂತಿಪ್ಪ ಕಾರ್ಯಕ್ರಮ ಮುಕ್ತಾಯಗೊಂಡಾಗ ಸಹಜವಾಗಿ ವೀಕ್ಷಕರಿಗೆ ಬೇಸರವಾಗಿತ್ತು. ಆದರೆ ಮಾತಿನ ಮಲ್ಲ ಸೃಜನ್ ತಮ್ಮ ಟೀಂ ನೊಂದಿಗೆ ಮರಳಿ ಬರುತ್ತಿದ್ದಾರೆ.
ಹಿಂದಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಶೋ 'ಕಾಮಿಡಿ ನೈಟ್ಸ್ ವಿತ್ ಕಪಿಲ್' ಕಾರ್ಯಕ್ರಮದ ಥರವೇ ಕನ್ನಡದಲ್ಲಿ ಮಜಾ ಟಾಕೀಸ್ ಮೂಡಿಬರುತ್ತಿದೆ. ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬರುವ ಸೆಲೆಬ್ರಿಟಿಗಳು ಅವರ ಬಣ್ಣದ ಬದುಕಿನ ಪಯಣದ ಜೊತೆಗೆ ಜೀವನದ ಕತೆಯನ್ನು ಕೂಡಾ ಹಂಚಿಕೊಳ್ಳುವುದು ವಿಶೇಷ. ಮಜಾ ಟಾಕೀಸ್ ಸೀಸನ್ 2 ಮುಕ್ತಾಯಗೊಳ್ಳುವ ಸಮಯದಲ್ಲಿ ನಾವು ಮತ್ತೆ ಬರುತ್ತೇವೆ ಎಂದು ಸೃಜನ್ ಲೋಕೇಶ್ ಹೇಳಿದ್ದರು. ಇದೀಗ ಸೀಸನ್ 3 ಆರಂಭಿಸುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೃಜನ್ ಪತ್ನಿ ರಾಣಿಯಾಗಿ ಶ್ವೇತಾ ಚೆಂಗಪ್ಪ ಕಾಣಿಸಿಕೊಂಡಿದ್ದರು. ಆದರೆ ಕಳೆದ ವರ್ಷವಷ್ಟೇ ಗಂಡು ಮಗುವಿಗೆ ಜನ್ಮ ನೀಡಿರುವ ಅವರು ಸದ್ಯ ತಮ್ಮ ಮಗ ಜಿಯಾನ್ ಅಯ್ಯಪ್ಪ ಲಾಲನೆ ಪಾಲನೆಯಲ್ಲಿ ಬ್ಯುಸಿ. ಅವರ ಹೊರತಾಗಿ ಅಪರ್ಣಾ, ಮಿಮಿಕ್ರಿ ದಯಾನಂದ್, ಕುರಿ ಪ್ರತಾಪ್, ಮಂಡ್ಯ ರಮೇಶ್, ಇಂದ್ರಜಿತ್ ಲಂಕೇಶ್, ವಿಶ್ವ, ಪವನ್ ಕುಮಾರ್, ರೇಖಾ ಮೋಹನ್ ಅವರು ಇದರಲ್ಲಿ ಭಾಗವಹಿಸಲಿದ್ದಾರೆ.