ಸುಮಾರು 2 ತಿಂಗಳಿಂದ ಪ್ರಸಾರವಾಗದ ಧಾರಾವಾಹಿಗಳು ಇಂದು ಮತ್ತೆ ಹೊಸ ಎಪಿಸೋಡ್ಗಳೊಂದಿಗೆ ಪ್ರಸಾರ ಆರಂಭಿಸಿವೆ. ಅದರಲ್ಲಿ ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಕೂಡಾ ಒಂದು. ಇದು ವೀಕ್ಷಕರಿಗೆ ಸಂತೋಷದ ವಿಚಾರವಾದರೂ ಬೇಸರದ ಸುದ್ದಿಯೊಂದಿದೆ.
ಇಂದಿನಿಂದ 'ಮಗಳು ಜಾನಕಿ' ಫ್ರೆಷ್ ಎಪಿಸೋಡ್ ಆರಂಭ: ಜೊತೆಗೆ ಬೇಸರದ ಸುದ್ದಿಯೂ ಇದೆ..ಏನದು..? - After June 15th Magalu Janaki will stop
ಟಿ.ಎನ್. ಸೀತಾರಾಮ್ ನಿರ್ದೇಶನದ 'ಮಗಳು ಜಾನಕಿ' ಧಾರಾವಾಹಿಯ ಫ್ರೆಷ್ ಎಪಿಸೋಡ್ಗಳು ಇಂದಿನಿಂದ ಆರಂಭವಾಗಲಿದ್ದು ಎರಡು ವಾರಗಳ ನಂತರ ಧಾರಾವಾಹಿ ಪ್ರಸಾರ ನಿಲ್ಲಿಸಲಿದೆ. ಇದು ಧಾರಾವಾಹಿಪ್ರಿಯರಿಗೆ ಬೇಸರದ ಸಂಗತಿಯಾಗಿದೆ.
'ಮಗಳು ಜಾನಕಿ' ಇಂದಿನಿಂದ ಪ್ರಸಾರ ಆರಂಭಿಸಿದರೂ 2 ವಾರಗಳ ನಂತರ ಅಂತ್ಯ ಕಾಣಲಿದೆ. ಸಾವಿರಾರು ವೀಕ್ಷಕರ ಮನಗೆದ್ದ ಕಿರುತೆರೆ ಧಾರಾವಾಹಿಗಳಲ್ಲಿ 'ಮಗಳು ಜಾನಕಿ' ಕೂಡಾ ಒಂದು. ಉತ್ತಮ ಕಥಾಹಂದರ ಹೊಂದಿರುವ ಕೌಟುಂಬಿಕ ಧಾರಾವಾಹಿ 'ಮಗಳು ಜಾನಕಿ' ಪ್ರಸಾರ ನಿಲ್ಲಿಸುತ್ತಿರುವುದು ಟಿ.ಎನ್. ಸೀತಾರಾಮ್ ಅಭಿಮಾನಿಗಳಿಗೆ ಬಹಳ ಬೇಸರ ತಂದಿದೆ. ಮಾಯಾಮೃಗ, ಮನ್ವಂತರ, ಮಳೆಬಿಲ್ಲು, ಮುಕ್ತ, ಮುಕ್ತ ಮುಕ್ತ, ಮಹಾಪರ್ವದಂತಹ ಸೂಪರ್ ಹಿಟ್ ಧಾರಾವಾಹಿಗಳನ್ನು ಕಿರುತೆರೆ ಲೋಕಕ್ಕೆ ಕೊಡುಗೆಯಾಗಿ ನೀಡಿರುವ ಟಿ.ಎನ್. ಸೀತಾರಾಮ್, 'ಮಗಳು ಜಾನಕಿ' ಮೂಲಕ ಕೂಡಾ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದ್ದರು.
'ಮಗಳು ಜಾನಕಿ' ಧಾರಾವಾಹಿಯಲ್ಲಿ ಇಂದಿನ ಸಂಚಿಕೆ ಮುಗಿದರೆ ನಾಳೆ ಕಥೆ ಏನಿರಬಹುದು ಎಂದು ವೀಕ್ಷಕರು ಜಾತಕ ಪಕ್ಷಿಗಳಂತೆ ಕಾದು ನೋಡುತ್ತಿದ್ದರು. ಆದರೆ ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಪ್ರಸಾರ ನಿಲ್ಲಿಸುತ್ತಿರುವ ಕಾರಣ ಈ ಧಾರಾವಾಹಿ ಕೂಡಾ ಮುಕ್ತಾಯಗೊಳ್ಳುತ್ತಿದೆ. ಧಾರಾವಾಹಿಯನ್ನು ಬೇರೆ ಚಾನೆಲ್ನಲ್ಲಿ ಮುಂದುವರಿಸಿ ಎಂದು ವೀಕ್ಷಕರು ಬೇಡಿಕೆಯಿಟ್ಟರೂ ಅದು ಸಾಧ್ಯವಿಲ್ಲ ಎಂದಿದ್ದಾರೆ ಸೀತಾರಾಮ್. ಈ ಧಾರಾವಾಹಿಯನ್ನು ಕಳೆದುಕೊಳ್ಳಲು ಮನಸ್ಸಿಲ್ಲದವರು 'ಮರಳಿ ಜಾನಕಿ' ಎಂಬ ಅಭಿಯಾನವನ್ನು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಆರಂಭಿಸಿದ್ದರು. ಇದಕ್ಕೂ ನೂರಾರು ಜನ ವೀಕ್ಷಕರು ಬೆಂಬಲ ನೀಡಿದ್ದರು. ಇದರಿಂದ ಅವರಿಗೆ ಈ ಧಾರಾವಾಹಿ ಮೇಲಿದ್ದ ವ್ಯಾಮೋಹ ಎಷ್ಟು ಎಂದು ತಿಳಿಯುತ್ತದೆ. ಒಟ್ಟಿನಲ್ಲಿ ಬಹಳಷ್ಟು ವೀಕ್ಷಕರ ಮನ ಗೆದ್ದಿದ್ದ ಧಾರಾವಾಹಿ ಅರ್ಧಕ್ಕೆ ಪ್ರಸಾರ ನಿಲ್ಲಿಸುತ್ತಿರುವುದು ಬೇಸರದ ಸಂಗತಿ.