ಕರ್ನಾಟಕ

karnataka

ETV Bharat / sitara

'ಲಕ್ಷ್ಮಿಬಾರಮ್ಮ' ಖ್ಯಾತಿಯ ಕುಮುದ ಲಾಕ್​​ಡೌನ್ ದಿನಗಳು ಹೇಗಿವೆ...? - ಅನಿಕಾ ಸಿಂಧ್ಯಾ ಬಗ್ಗೆ ಒಂದಷ್ಟು ಮಾಹಿತಿ

'ಲಕ್ಷ್ಮಿಬಾರಮ್ಮ' ಖ್ಯಾತಿಯ ಅನಿಕಾ ಸಿಂಧ್ಯಾ ಕುಟುಂಬದವರೊಂದಿಗೆ ಲಾಕ್​​ಡೌನ್​ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರಂತೆ. ಅಮ್ಮನಿಗೆ ಮನೆಕೆಲಸಗಳಲ್ಲಿ ಸಹಾಯ ಮಾಡುವುದಲ್ಲದೆ ಮೊದಲಿಗಿಂತ ಹೆಚ್ಚಾಗಿ ಟಿಕ್​​ಟಾಕ್ ವಿಡಿಯೋ ಮಾಡುತ್ತಿದ್ದಾರಂತೆ.

Anika sindya
ಅನಿಕಾ ಸಿಂಧ್ಯಾ

By

Published : Apr 24, 2020, 8:17 PM IST

Updated : Apr 24, 2020, 8:22 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನಪ್ರಿಯತೆ ಗಳಿಸಿದ್ದ 'ಲಕ್ಷ್ಮಿಬಾರಮ್ಮ' ಧಾರಾವಾಹಿ ಮುಗಿದು ಎರಡು ತಿಂಗಳಾಗುತ್ತಾ ಬಂತು. ಆದರೂ ಜನರು ಈ ಧಾರಾವಾಹಿಯ ಪಾತ್ರಧಾರಿಗಳನ್ನು ಮರೆತಿಲ್ಲ. ಏಕೆಂದರೆ ಈ ಧಾರಾವಾಹಿ ಪಾತ್ರಗಳು ಜನರ ಮನಸ್ಸಿನಲ್ಲಿ ಅಷ್ಟರ ಮಟ್ಟಿಗೆ ಅಚ್ಚೊತ್ತಿವೆ. ಈ ಧಾರಾವಾಹಿಯಲ್ಲಿ ನಾಯಕ, ನಾಯಕಿ ಜೊತೆಗೆ ಜನರು ನೆನಪಿನಲ್ಲಿಡುವ ಮತ್ತೊಂದು ಪಾತ್ರ ವಿಲನ್ ಕುಮುದ.

'ಲಕ್ಷ್ಮಿಬಾರಮ್ಮ' ಖ್ಯಾತಿಯ ಕುಮುದ

ಧಾರಾವಾಹಿಯಲ್ಲಿ ಕುಮುದ ಆಗಿ ರಾಜ್ಯಾದ್ಯಂತ ಮನೆ ಮಾತಾಗಿರುವ ಅನಿಕಾ ಸಿಂಧ್ಯಾ ಈವರೆಗೆ ಸುಮಾರು 45 ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಬಹುತೇಕ ಧಾರಾವಾಹಿಗಳಲ್ಲಿ ಅವರು ನೆಗೆಟಿವ್ ಪಾತ್ರಗಳಿಗೆ ಹೆಚ್ಚು ಜೀವ ತುಂಬಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಾಯಕ ಸೂರ್ಯನ ಅಕ್ಕನ ಪಾತ್ರದಲ್ಲಿ ನಟಿಸುತ್ತಿರುವ ಅನಿಕಾ, ಲಾಕ್​ಡೌನ್​ನಲ್ಲಿ ಮನೆಮಂದಿಯೊಂದಿಗೆ ಕಾಲ ಕಳೆಯುತ್ತಿದ್ದಾರೆ. 'ಈ ಸಮಯವನ್ನು ನಾನು ಬಹಳ ಎಂಜಾಯ್ ಮಾಡುತ್ತಿದ್ದೇನೆ. ಆರಂಭದಲ್ಲಿ ಲಾಕ್​​ಡೌನ್​​​​ನಿಂದ ಮನೆಯಲ್ಲಿ ಇರುವುದು ಬಹಳ ಕಷ್ಟ ಆಯ್ತು. ಆದರೆ ಇದೀಗ ಮನೆ ಕೆಲಸಗಳಲ್ಲೇ ಬ್ಯುಸಿ ಆಗಿದ್ದೇನೆ. ಮನೆ ಕೆಲಸದಲ್ಲಿ ಅಮ್ಮನ ಜೊತೆ ಕೈ ಜೋಡಿಸುತ್ತೇನೆ. ತಮ್ಮನ ಜೊತೆ ಫೈಟ್ ಮಾಡುವುದೆಂದರೆ ತುಂಬಾ ಖುಷಿ. ಅಲ್ಲದೆ, ಈ ಬಿಡುವಿನ ವೇಳೆಯಲ್ಲಿ ನಾನು ಟಿಕ್​​​ ಟಾಕ್​​​​ಗೆ ಅಡಿಕ್ಟ್ ಆಗಿದ್ದೇನೆ. ಹೆಚ್ಚುಹೆಚ್ಚು ಟಿಕ್ ಟಾಕ್ ವಿಡಿಯೋ ಮಾಡುತ್ತಿರುತ್ತೇನೆ. ಒಟ್ಟಾರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಮೊದಲಿಗಿಂತ ಹೆಚ್ಚು ಸಕ್ರಿಯಳಾಗಿರುತ್ತೇನೆ' ಎಂದು ನಗುತ್ತಾ ಹೇಳುತ್ತಾರೆ ಅನಿಕಾ ಸಿಂಧ್ಯಾ.

ಲಾಕ್​ಡೌನ್ ದಿನಗಳನ್ನು ಎಂಜಾಯ್ ಮಾಡುತ್ತಿರುವ ಅನಿಕಾ

ಸಹೋದರ ವಿನಯ್ ಸಿಂಧ್ಯಾ ಬಗ್ಗೆ ಕೂಡಾ ಹೇಳಿಕೊಂಡಿರುವ ಅನಿಕಾ 'ನಾನು ಮತ್ತು ವಿನಯ್ ಅಕ್ಕ ತಮ್ಮ ಎನ್ನುವುದಕ್ಕಿಂತ ಸ್ನೇಹಿತರಂತೆ ಇರುತ್ತೇವೆ. ನಾವು ಜಗಳವಾಡಿದರೂ ಕ್ಷಣದಲ್ಲೇ ರಾಜಿಯಾಗಿಬಿಡುತ್ತೇವೆ. ಯಾವುದೇ ವಿಚಾರಗಳಿದ್ದರೂ ನಾನು ಮೊದಲು ಹೇಳಿಕೊಳ್ಳುವುದು ನನ್ನ ತಮ್ಮನಿಗೆ. ನನ್ನ ತಮ್ಮ ನನ್ನ ಫಿಟ್ನೆಸ್ ಗುರು ಕೂಡಾ ಹೌದು. ಫಿಟ್ನೆಸ್ ಬಗ್ಗೆ ವಿಶೇಷ ಒಲವು ಹೊಂದಿರುವ ವಿನಯ್ ನನಗೆ ಹೊಸ ಹೊಸ ವ್ಯಾಯಾಮಗಳನ್ನು ಹೇಳಿಕೊಡುತ್ತಾನೆ. ಜಿಮ್​​​ಗೆ ಹೋಗದಿದ್ದರೂ ಮನೆಯಲ್ಲೇ ಆತ ಫಿಟ್ನೆಸ್ ಬಗ್ಗೆ ಸಲಹೆ ನೀಡುತ್ತಾನೆ. ಒಟ್ಟಿನಲ್ಲಿ ಲಾಕ್​ಡೌನ್​​​​​ ನೆಪದಲ್ಲಿ ಮನೆ ಮಂದಿಯ ಜೊತೆಯಲ್ಲಿ ಕಾಲ ಕಳೆಯುವಂತಾಗಿದೆ' ಎನ್ನುತ್ತಾರೆ ಅನಿಕಾ. ಅಕ್ಕನಿಂದಲೇ ನಟನೆಯ ರೀತಿ ನೀತಿಗಳನ್ನು ಕಲಿತೆ ಎಂದು ಹೇಳುವ ವಿನಯ್ ಸಿಂಧ್ಯಾಗೆ ಅಕ್ಕ ಮಾಡುವ ಬನಾನ ಕೇಕ್ ತಿನ್ನಲು ಬಹಳ ಇಷ್ಟವಂತೆ.

Last Updated : Apr 24, 2020, 8:22 PM IST

ABOUT THE AUTHOR

...view details