ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಮೂವರು ಕಲಾವಿದರು ಜೊತೆಯಾಗಿದ್ದಾರೆ. ಅದರೆ ಇವರೆಲ್ಲಾ ಸೇರಿ ಮತ್ತೆ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರಾ ಎಂದುಕೊಳ್ಳಬೇಡಿ.
ಚಂದನ್ ಕುಮಾರ್, ಚಂದುಗೌಡ, ರಶ್ಮಿ ಪ್ರಭಾಕರ್ ಮೂವರೂ ಒಟ್ಟಿಗೆ ಇರುವ ಪೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ದೊರೆತಿದೆ. ಆದರೆ ಇವರು ಭೇಟಿಯಾಗಿರುವುದು ದೂರದ ಹೈದರಾಬಾದ್ನಲ್ಲಿ. ಚಂದನ್ ಕುಮಾರ್ ಕನ್ನಡ ಕಿರುತೆರೆ ಜೊತೆಗೆ ತೆಲುಗು ಕಿರುತೆರೆಯಲ್ಲಿಯೂ ಬ್ಯುಸಿಯಾಗಿದ್ದಾರೆ. ಲಾಕ್ಡೌನ್ನಿಂದ ಮನೆಯಲ್ಲೇ ಉಳಿದಿದ್ದ ರಶ್ಮಿ ಹಾಗೂ ಚಂದುಗೌಡ ಕೂಡಾ ಈಗ ಶೂಟಿಂಗ್ಗೆ ಹಾಜರಾಗಿದ್ದಾರೆ. ಶೂಟಿಂಗ್ಗಾಗಿ ಹೈದರಾಬಾದ್ ತೆರಳಿರುವ ಇವರೆಲ್ಲಾ ಅಲ್ಲೇ ಭೇಟಿಯಾಗಿದ್ದಾರೆ.
ಈ ಮೂವರೂ 'ಲಕ್ಷ್ಮಿಬಾರಮ್ಮ' ಧಾರಾವಾಹಿಯಲ್ಲಿ ನಟಿಸಿದ್ದರು. ಧಾರಾವಾಹಿಯಿಂದ ಅರ್ಧಕ್ಕೆ ಹೊರ ನಡೆದ ಚಂದನ್, ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರ್ವಮಂಗಳೆ ಮಾಂಗಲ್ಯೇ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು. ಇದೀಗ ತೆಲುಗಿನ 'ಸಾವಿತ್ರಗಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ನಂತರ ಚಂದನ್ ಪಾತ್ರಕ್ಕೆ ಜೀವ ತುಂಬಿದವರು ಚಂದು ಗೌಡ. ತಮ್ಮ ಮನೋಜ್ಞ ಅಭಿನಯದ ಮೂಲಕ ವೀಕ್ಷಕರ ಮನ ಸೆಳೆದಿರುವ ಚಂದು ಗೌಡ ಈಗ ತೆಲುಗಿನ 'ತ್ರಿನಯಿನಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನು ಲಚ್ಚಿ ಆಗಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ಚೆಲುವೆ ರಶ್ಮಿ ಪ್ರಭಾಕರ್ ಕೂಡಾ ತೆಲುಗು ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತೆಲುಗಿನ 'ಪೌರ್ಣಮಿ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ತೆಲುಗು ಜನರಿಗೆ ಕೂಡಾ ರಶ್ಮಿ ಬಹಳ ಹತ್ತಿರವಾಗಿದ್ದಾರೆ.