ಯಶ್ ಅಭಿನಯದ 'ಕೆಜಿಎಫ್ 2' ಚಿತ್ರದ ಟೀಸರ್ ಎರಡು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಭಾರತೀಯ ಚಿತ್ರರಂಗದ ಎಲ್ಲಾ ಹಳೆಯ ದಾಖಲೆಗಳನ್ನು ಪುಡಿಪುಡಿ ಮಾಡಿದೆ.
ಹೌದು, ಶನಿವಾರ ಸಂಜೆ ವೇಳೆಗೆ ಯೂಟ್ಯೂಬ್‍ನಲ್ಲಿ 'ಕೆಜಿಎಫ್ 2' ಚಿತ್ರದ ಟೀಸರ್ ಅನ್ನು 100 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಮೂಲಕ 'ಸೂರ್ಯವಂಶಿ', 'ಮಾಸ್ಟರ್', 'ದಿಲ್ ಬೇಚಾರಾ' ಮುಂತಾದ ಚಿತ್ರಗಳ ಹಿಂದಿನ ದಾಖಲೆಗಳನ್ನು ಮುರಿದು ಹಾಕಿದೆ.
ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಟ್ರೈಲರ್ ಎಂಬ ಹೆಗ್ಗಳಿಕೆಗೆ 'ಬಾಹುಬಲಿ 2' ಪಾತ್ರವಾಗಿದೆ. ಈ ಟ್ರೈಲರ್ ಅನ್ನು 11 ಕೋಟಿ 80 ಲಕ್ಷ ಮಂದಿ ವೀಕ್ಷಣೆ ಮಾಡಿದ್ದರು. ಈಗಾಗಲೇ 'ಕೆಜಿಎಫ್ 2' ಚಿತ್ರದ ಟೀಸರ್ ಅನ್ನು 11 ಕೋಟಿ 70 ಲಕ್ಷ ಜನರು ವೀಕ್ಷಣೆ ಮಾಡಿದ್ದು, 'ಬಾಹುಬಲಿ 2' ಚಿತ್ರದ ಟ್ರೈಲರ್ ದಾಖಲೆಯನ್ನು ಮುರಿಯುವುದಕ್ಕೆ ಸಜ್ಜಾಗಿದೆ. ಈ ಹಿನ್ನೆಲೆ ಇಂದು ಸಂಜೆಯೊಳಗೆ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.
ಮೂರು ವರ್ಷಗಳಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ವೀಕ್ಷಣೆಯಾದ ಟೀಸರ್ ಎಂಬ ಹೆಗ್ಗಳಿಕೆಗೆ 'ಬಾಹುಬಲಿ 2' ಪಾತ್ರವಾಗಿತ್ತು. ಆದರೆ 'ಕೆಜಿಎಫ್ 2' ಆ ದಾಖಲೆಯನ್ನು ಮೂರೇ ದಿನಗಳಲ್ಲಿ ಮುರಿಯುವುದರ ಜೊತೆಗೆ ಅತೀ ಹೆಚ್ಚು ಲೈಕ್ಸ್ ಪಡೆದ ಟೀಸರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.