ಉತ್ತರ ಪ್ರದೇಶ:ಖ್ಯಾತ ಹಿಂದಿ ಕಿರುತೆರೆ ನಟ ಆಂಶ್ ಅರೋರಾ ಹಾಗೂ ಆತನ ಸಹೋದರನ ಮೇಲೆ ಹಲ್ಲೆ ನಡೆಸಿರುವ ಆರೋಪ ಘಾಜಿಯಾಬಾದ್ ಪೊಲೀಸರ ವಿರುದ್ಧ ಕೇಳಿ ಬಂದಿದೆ.
ಮೇ.12 ರ ರಾತ್ರಿ ಊಟದ ವಿಚಾರಕ್ಕಾಗಿ ಅರೋರಾ ಹಾಗೂ ಹೊಟೇಲ್ ಸಿಬ್ಬಂದಿಯೊಂದಿಗೆ ಜಗಳ ನಡೆದಿದೆ. ಈ ಪ್ರಕರಣದಡಿ ಅರೋರಾ ಅವರನ್ನು ಬಂಧಿಸಿದ ಘಾಜಿಯಾಬಾದ್ ಪೊಲೀಸರು ಠಾಣೆಗೆ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆ. ಅಣ್ಣನನ್ನು ಹುಡುಕಿಕೊಂಡ ಠಾಣೆಗೆ ಬಂದ ಅರೋರಾ ಸಹೋದರನನ್ನು ವಶಕ್ಕೆ ಪಡೆದು,ಆತನ ಮೇಲೆಯೂ ಲಾಠಿ ಬೀಸಿದ್ದಾರೆ ಎನ್ನಲಾಗಿದೆ.
ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಅರೋರಾ, ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರಂತೆ. ಅವರು ಸದ್ಯ ಪೊಲೀಸರ ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರಂತೆ.
ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅರೋರಾ, ನಾನು ಆರ್ಡರ್ ಮಾಡಿದ್ದ ತಿಂಡಿ ತಂದು ಕೊಡುವಲ್ಲಿ ತಡವಾಗಿದ್ದಕ್ಕೆ, ಅದನ್ನು ಕ್ಯಾನ್ಸಲ್ ಮಾಡಿದ್ದೆ. ಆದರೆ, ಬಿಲ್ನಲ್ಲಿ ತಿಂಡಿಗೆ ಹಣ ಪಡೆಯಲಾಗಿತ್ತು. ಇದನ್ನು ಪ್ರಶ್ನಿಸಿದ್ದಕ್ಕಾಗಿ ಜಗಳ ಶುರುವಾಯಿತು. ನಾನು ಹಾಗೂ ಸಿಬ್ಬಂದಿ ಪರಸ್ಪರ ಬೈದಾಡಿಕೊಂಡೆವು. ಈ ವೇಳೆ ಕೌಂಟರ್ನಲ್ಲಿದ್ದ ಗ್ಲಾಸನ್ನು ಒಡೆದು ಹಾಕಿದೆ. ನಂತರ ಮನೆಗೆ ವಾಪಾಸ್ ಆದೆ. ಕೆಲಹೊತ್ತಿನ ಬಳಿಕ ಗ್ಲಾಸ್ ಒಡೆದಿದ್ದಕ್ಕೆ ಹಣ ಕೊಟ್ಟು, ಕ್ಷಮೆ ಕೇಳಿ ಬರೋಣ ಅಂತಾ ಮತ್ತೆ ಹೊಟೇಲ್ಗೆ ಹೋದೆ. ಆದರೆ, ಅವರು ನನ್ನನ್ನು ಪೊಲೀಸರ ಕೈಗೆ ಒಪ್ಪಿಸಿದರು. ಠಾಣೆಯಲ್ಲಿ ಪೊಲೀಸರು ಕೆಟ್ಟದಾಗಿ ವರ್ತಿಸಿದ್ರು. ರಾತ್ರಿಯೆಲ್ಲಾ ಹಲ್ಲೆ ನಡೆಸಿ ಟಾರ್ಚರ್ ಕೊಟ್ರು. ನನ್ನ ತಮ್ಮನನ್ನೂ ಲಾಕಪ್ನಲ್ಲಿ ಇರಿಸಿ ಹಲ್ಲೆ ನಡೆಸಿದ್ದಾರೆ ಎಂದು ಅರೋರಾ ಆರೋಪ ಮಾಡಿದ್ದಾರೆ.