ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ' ವಿಭಿನ್ನವಾಗಿ ಮೂಡಿ ಬರುತ್ತಿರುವ ಧಾರಾವಾಹಿ. ಕನ್ನಡತಿಗೆ ಈಗ 100 ರ ಸಂಭ್ರಮ. ಧಾರಾವಾಹಿ ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಧಾರಾವಾಹಿಯ ಕೇಂದ್ರ ಬಿಂದುವಾಗಿರುವ ಭುವನೇಶ್ವರಿ ಅಲಿಯಾಸ್ ರಂಜನಿ ರಾಘವನ್, ಈ ಧಾರಾವಾಹಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 'ಕನ್ನಡತಿ' ಧಾರಾವಾಹಿ ನನಗೆ ಇತರ ಧಾರಾವಾಗಳಿಗಿಂತ ಸ್ವಲ್ಪ ಹೆಚ್ಚು ಇಷ್ಟ ಎನ್ನಬಹುದು. ಏಕೆಂದರೆ ಈ ಧಾರಾವಾಹಿಯಲ್ಲಿ ಭಾಷೆಯ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವ ಜವಾಬ್ದಾರಿ ನನ್ನ ಮೇಲಿದೆ.
ಜನರಿಗೆ ಕನ್ನಡದ ಸ್ಪಷ್ಟತೆಯ ಬಗ್ಗೆ ಅರಿವು ಮೂಡಿಸುವ ಕಾಳಜಿಯನ್ನು ಹೊಂದಿರುವ ಧಾರಾವಾಹಿ ಇದಾಗಿದೆ. ನನ್ನ ಪಾತ್ರ ಕೇವಲ ಹೆಸರಿಗಷ್ಟೇ ಮಾತ್ರವಲ್ಲ. ನಾನು ಕನ್ನಡ ಪಾಠ ಮಾಡುವುದನ್ನೂ ಹೈಲೈಟ್ ಮಾಡಲಾಗಿದೆ. ನನ್ನ ಪಾತ್ರ ಬಹಳ ಪಾಸಿಟಿವ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಕಮೆಂಟ್ ನೋಡಿ ಬಹಳ ಖುಷಿಯಾಗುತ್ತದೆ. ಅವರ ಪ್ರೀತಿ, ಅಭಿಮಾನಕ್ಕೆ ನಾನು ಎಂದಿಗೂ ಚಿರಋಣಿ. ನಿಮ್ಮ ಪಾತ್ರ ಎಲ್ಲರಿಗೂ ಮಾದರಿಯಾಗಿದೆ ಎಂದು ಜನರು ಹೇಳಿದಾಗ ಬಹಳ ಖುಷಿಯಾಗುತ್ತದೆ ಎನ್ನುತ್ತಾರೆ ಈ ಮುದ್ದು ಹುಡುಗಿ.
ಭುವನೇಶ್ವರಿ ಪಾತ್ರದಲ್ಲಿ ರಂಜನಿ ಧಾರಾವಾಹಿಯಲ್ಲಿ ನಾಯಕನಾಗಿ ಕಿರಣ್ ರಾಜ್ ಅಭಿನಯಿದ್ದಾರೆ. ಇನ್ನು ಮುಂದೆ ಕಥೆಗೆ ತಿರುವು ಸಿಗಲಿದ್ದು ದೊಡ್ಡ ಕಂಪನಿಯ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತೇನೆ ಎಂಬುದನ್ನು ವೀಕ್ಷಕರು ಮುಂದಿನ ದಿನಗಳಲ್ಲಿ ನೋಡಬಹುದು ಎಂದು ರಂಜನಿ ಹೇಳಿದ್ದಾರೆ. ಪ್ರತಿದಿನ ರಾತ್ರಿ 7.30 ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕನ್ನಡತಿ' ಪ್ರಸಾರವಾಗುತ್ತಿದೆ.