ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕೂಡಾ ಒಂದು. ಲಾಕ್ಡೌನ್ನಿಂದಾಗಿ ಧಾರಾವಾಹಿಗಳ ಪ್ರಸಾರ ನಿಂತಿರುವ ಕಾರಣ ಹಳೆಯ ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳು ಕೂಡಾ ಮರು ಪ್ರಸಾರ ಆರಂಭಿಸಿದೆ. ವೀಕ್ಷಕರು ಕೂಡಾ ಹಳೆಯ ಧಾರಾವಾಹಿಗಳು ಪ್ರಸಾರವಾಗುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ನಿಮ್ಮ ಜ್ಞಾನ ಹೆಚ್ಚಿಸಲು ಮತ್ತೆ ಬರಲಿದ್ದಾರೆ ಪವರ್ ಸ್ಟಾರ್
ರಿಯಾಲಿಟಿ ಶೋ, ಧಾರಾವಾಹಿಗಳ ಫ್ರೆಷ್ ಎಪಿಸೋಡ್ಗಳು ಮುಗಿದಿರುವುದರಿಂದ ಹಳೆಯ ಕಾರ್ಯಕ್ರಮಗಳು ಮರುಪ್ರಸಾರವಾಗುತ್ತಿದೆ. ಇವುಗಳಲ್ಲಿ ಪುನೀತ್ ರಾಜ್ಕುಮಾರ್ ನಡೆಸಿಕೊಡುವ 'ಕನ್ನಡದ ಕೋಟ್ಯಧಿಪತಿ' ಕೂಡಾ ಒಂದು
ಮರುಪ್ರಸಾರ ಕಾಣಲಿರುವ ಕಾರ್ಯಕ್ರಮಗಳಲ್ಲಿ 'ಕನ್ನಡದ ಕೋಟ್ಯಧಿಪತಿ' ಕೂಡಾ ಒಂದು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಕನ್ನಡದ ಕೋಟ್ಯಧಿಪತಿಯನ್ನು ಕಿರುತೆರೆ ವೀಕ್ಷಕರು ಬಹಳ ಮೆಚ್ಚಿಕೊಂಡಿದ್ದರು. ಕಳೆದ ವರ್ಷವಷ್ಟೇ ಪ್ರಸಾರವಾಗಿದ್ದ 'ಕನ್ನಡದ ಕೋಟ್ಯಧಿಪತಿ' ಸೀಸನ್ 4 ಮತ್ತೆ ಪ್ರಸಾರವಾಗಲಿದೆ. ಈ ಮೂಲಕ ಲಾಕ್ಡೌನ್ ಸಮಯದಲ್ಲಿ ಪ್ರೇಕ್ಷಕರ ಜ್ಞಾನ ಹೆಚ್ಚಿಸಲಿದ್ದಾರೆ ಅಪ್ಪು. 'ಕನ್ನಡದ ಕೋಟ್ಯಧಿಪತಿ' ಯಶಸ್ವಿ 4 ಸೀಸನ್ಗಳನ್ನು ಪೂರೈಸಿದ್ದು ಪ್ರಸ್ತುತ ಸೀಸನ್ನಲ್ಲಿ ಸೆಲೆಬ್ರಿಟಿಗಳು ಕೂಡಾ ಸ್ಪರ್ಧಿಗಳಾಗಿ ಭಾಗವಹಿಸಿದ್ದರು.
ಜಯರಾಮ್ ಕಾರ್ತಿಕ್, ನಿವೇದಿತಾ ಗೌಡ, ಅಕುಲ್ ಬಾಲಾಜಿ ಮುಂತಾದವರು ಸೀಸನ್ 4 ರಲ್ಲಿ ಅಪ್ಪು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಸಂಸದರಾದ ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ ಅವರು ಕೂಡಾ ಈ ಸೀಸನ್ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ತಾವು ಕಾರ್ಯಕ್ರಮದಲ್ಲಿ ಗೆದ್ದ ಹಣವನ್ನು ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ದೇಣಿಗೆಯಾಗಿ ನೀಡಿದ್ದರು. ಮೊದಲೆರಡು ಸೀಸನ್ಗಳನ್ನು ಕೂಡಾ ಪುನೀತ್ ರಾಜ್ಕುಮಾರ್ ಅವರೇ ನಿರೂಪಿಸಿದ್ದರು. ಮೂರನೇ ಸೀಸನ್ ರಮೇಶ್ ಅರವಿಂದ್ ನಿರೂಪಣೆಯಲ್ಲಿ ಮೂಡಿಬಂದಿತ್ತು. ಮತ್ತೆ 4ನೇ ಸೀಸನ್ನಲ್ಲಿ ಪುನೀತ್ ರಾಜ್ಕುಮಾರ್ ನಿರೂಪಣೆ ಮಾಡಿದ್ದರು.