ಕೇರಳದಲ್ಲಿ ಗರ್ಭಿಣಿ ಆನೆಯೊಂದಕ್ಕೆ ಸ್ಫೋಟಕ ತುಂಬಿದ ಹಣ್ಣು ನೀಡಿ ಕೊಂದ ವಿಚಾರ ನಿನ್ನೆಯಿಂದ ಸಾಕಷ್ಟು ಸುದ್ದಿಯಾಗುತ್ತಿದೆ. ಪಾಪಿಗಳು ಮಾಡಿದ ಈ ಹೀನಾಯ ಕೃತ್ಯಕ್ಕೆ ಚಿತ್ರರಂಗ ಕೂಡಾ ದು:ಖ ವ್ಯಕ್ತಪಡಿಸಿದೆ. ಇದೀಗ ಕನ್ನಡ ಕಿರುತೆರೆ ಕಲಾವಿದರು ಕೂಡಾ ಆ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎನ್ನುತ್ತಿದ್ದಾರೆ.
'ಈ ಕೃತ್ಯವನ್ನು ನೋಡಿದ ಬಳಿಕ ನನಗೆ ನಿಜವಾಗಿಯೂ ಪ್ರಾಣಿಗಳಿಂತ ಮನುಷ್ಯನೇ ತುಂಬಾ ಡೇಂಜರಸ್ ಎಂದೆನಿಸುತ್ತಿದೆ. ಮತ್ತೊಮ್ಮೆ ಮನುಷ್ಯತ್ವ ಸೋತಿದೆ. ನಿಜಕ್ಕೂ ತುಂಬಾ ಬೇಸರದ ಸಂಗತಿ. ಮಾತ್ರವಲ್ಲ ಇದು ಮಾನವ ಜನ್ಮಕ್ಕೆ ಅವಮಾನ ತಂದ ಪ್ರಕರಣ' ಎಂದು ಮಜಾ ಟಾಕೀಸ್ನ ರಾಣಿ ಖ್ಯಾತಿಯ ಶ್ವೇತಾ ಚೆಂಗಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಬಿಗ್ಬಾಸ್ ಮಾಜಿ ಸ್ಪರ್ಧಿ, ನಿರೂಪಕ ಕಿರಿಕ್ ಕೀರ್ತಿ ಕೂಡಾ ಈ ಘಟನೆಗೆ ಸಂಬಂಧಿಸಿದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದು ಮಾನವನ ಈ ಹೀನಾಯ ಕೃತ್ಯವನ್ನು ಖಂಡಿಸಿದ್ದಾರೆ.