ಕರ್ನಾಟಕ

karnataka

ETV Bharat / sitara

ಸಕಲಕಲಾವಲ್ಲಭೆ 'ಕಮಲಿ' ಈ ಮಲೆನಾಡಿನ ಚೆಲುವೆ - ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ

ಕಿರುತೆರೆ ವೀಕ್ಷಕರಿಗೆ ಇವರದ್ದು ಪರಿಚಿತ ಮುಖ. ಖಾಸಗಿ ವಾಹಿನಿಯ ಜನಪ್ರಿಯ ಧಾರಾವಾಹಿ 'ಕಮಲಿ' ಯಲ್ಲಿ ನಾಯಕ ರಿಷಿಯ ತಂಗಿ ರಚನಾ ಪಾತ್ರಧಾರಿಯಾಗಿ ಮಿಂಚುತ್ತಿರುವ ಈ ಮಲೆನಾಡ ಬೆಡಗಿ ಹೆಸರು ಯಶಸ್ವಿನಿ ರವೀಂದ್ರ.

ಯಶಸ್ವಿನಿ ರವೀಂದ್ರ

By

Published : Sep 13, 2019, 1:26 PM IST

ಯಶಸ್ವಿನಿ ರವೀಂದ್ರ ಅವರದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಯಶಸ್ವಿನಿ ಮುಂದೆ ಕೆಲಸ ಅರಸಿಕೊಂಡು ಬಂದದ್ದು ಮಹಾನಗರಿ ಬೆಂಗಳೂರಿಗೆ. ಸ್ಟೂಡೆಂಟ್ ಅಡ್ವೈಸರ್ ಆಗಿ ಕೆಲಸ ಮಾಡುವಾಗ ಮನಸ್ಸು ನೃತ್ಯದತ್ತ ವಾಲಿದೆ. ಕೂಡಲೇ ಮನಸ್ಸಿನ ಮಾತಿಗೆ ಅಸ್ತು ಎಂದ ಯಶಸ್ವಿನಿ ನೃತ್ಯ ಕಲಿಯುವ ಆಲೋಚನೆ ಮಾಡಿದ್ದಾರೆ. ಮುಂದೆ ರಂಜಿತಾ ಅವರ ಬಳಿ ಕಥಕ್ ನೃತ್ಯ ಗರಡಿಯಲ್ಲಿ ನೃತ್ಯದ ಪ್ರಾಕಾರಗಳನ್ನು ಕಲಿತರು. ಕೆಲವು ದಿನಗಳ ನಂತರ ನೃತ್ಯದ ಜೊತೆಗೆ ಯಶಸ್ವಿನಿಗೆ ಬಣ್ಣದ ಲೋಕ ಕೂಡಾ ಸೆಳೆದಿದೆ.

ನಟಿಸಬೇಕು ಎಂದು ಅನ್ನಿಸಿದ್ದೇ ತಡ, ಆಡಿಶನ್​​​ಗಳಲ್ಲಿ ಭಾಗವಹಿಸಲು ಆರಂಭಿಸಿದರು ಯಶಸ್ವಿನಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪಿ. ಶೇಷಾದ್ರಿ ನಿರ್ದೇಶನದ 'ಸಾಕ್ಷಿ' ಧಾರಾವಾಹಿಗೆ ಮೊದಲು ಆಯ್ಕೆ ಆದರು. ಆದರೆ ಅವರು ಆಯ್ಕೆ ಆದದ್ದು ಬಾಣಂತಿ ಪಾತ್ರಕ್ಕೆ. ಆದರೆ ಈಗಷ್ಟೇ ಸಣ್ಣ ಪ್ರಾಯ, ಇಷ್ಟು ಸಣ್ಣ ಪ್ರಾಯಕ್ಕೆ ಬಾಣಂತಿ ಪಾತ್ರವಾ ಎಂಬ ಗೊಂದಲದಲ್ಲಿದ್ದ ಆಕೆಗೆ ಆ ಪಾತ್ರ ಬೇಡ ಎಂದು ನಿರ್ದೇಶಕರೇ ಅಂದುಬಿಟ್ಟರು. ಬಂದ ಅವಕಾಶ ಕೈ ತಪ್ಪಿ ಹೋಯಿತಲ್ಲ ಎಂದು ಯೋಚಿಸುತ್ತಿರುವಾಗಲೇ ನಾಯಕನ ಅತ್ತೆ ಮಗಳ ಪಾತ್ರಕ್ಕೆ ಆಯ್ಕೆ ಆದರು. ದಿಶಾ ಹೆಸರಿನ ಬಬ್ಲಿ ಪಾತ್ರವದು. ಅದರಲ್ಲಿ ಮನೋಜ್ಞವಾಗಿ ಅಭಿನಯಿಸಿ ಯಶಸ್ವಿನಿ ವೀಕ್ಷಕರ ಮನ ಸೆಳೆದರು.

ಕಾಲೇಜಿನಲ್ಲಿ ಓದುತ್ತಿರುವಾಗಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಯಶಸ್ವಿನಿ ನಿರೂಪಣೆ ಜೊತೆಗೆ ಕಂಠದಾನವನ್ನೂ ಮಾಡುತ್ತಾರೆ. ಸಕಲಾಕಲಾವಲ್ಲಭೆಯಾಗಿ ಗುರುತಿಸಿಕೊಂಡಿರುವ ಯಶಸ್ವಿನಿ ಮನೆದೇವರು ಧಾರಾವಾಹಿಯ ನೆಗೆಟಿವ್ ಪಾತ್ರದಲ್ಲಿ ಕೂಡಾ ನಟಿಸಿದ್ದಾರೆ. ಇದೀಗ 'ಕಮಲಿ' ಧಾರಾವಾಹಿ ರಚನಾ ಆಗಿ ಬ್ಯುಸಿಯಾಗಿರುವ ಮಲೆನಾಡಿನ ಚೆಂದುಳ್ಳಿ ಚೆಲುವೆ ಯಶಸ್ವಿನಿ 'ಕಾಲವೇ ಮೋಸಗಾರ' ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲೂ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ.

ABOUT THE AUTHOR

...view details