ವೀಕ್ಷಕರ ಮೆಚ್ಚಿನ ಕಾರ್ಯಕ್ರಮ ಮಜಾ ಟಾಕೀಸ್ ಸೀಸನ್ 3, ಇಂದಿನಿಂದ ಆರಂಭವಾಗುತ್ತಿದೆ. ಎರಡು ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಕಾರ್ಯಕ್ರಮ ಇದೀಗ ಮತ್ತೆ ವೀಕ್ಷಕರನ್ನು ನಕ್ಕು ನಗಿಸಲು ಬರುತ್ತಿದೆ. ಸೃಜನ್ ಲೋಕೇಶ್ ಹಾಗೂ ತಂಡ ಕೂಡಾ ಬಹಳ ಎಕ್ಸೈಟ್ ಆಗಿದೆ.
ಮಜಾ ಟಾಕೀಸ್ನ ವಿಭಿನ್ನ ರೀತಿಯ ಪ್ರೋಮೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಾರಿ ಸೃಜನ್ ಲೋಕೇಶ್ ಪತ್ನಿ ರಾಣಿ ಪಾತ್ರದಲ್ಲಿ ಶ್ವೇತಾ ಚಂಗಪ್ಪ ಬದಲು ಮತ್ತೊಬ್ಬ ನಟಿ ಬರುತ್ತಿದ್ದಾರೆ. ಆದರೆ ಆಕೆ ಯಾರು ಎಂದು ಇದುವರೆಗೂ ತಿಳಿದುಬಂದಿಲ್ಲ. ಪ್ರೋಮೋದಲ್ಲಿ ಮಾತ್ರ ಒಬ್ಬ ನಟಿ ಸೀರೆಯಿಂದ ಮುಖವನ್ನು ಮುಚ್ಚಿದ್ದು ನಾನ್ಯಾರು ಎಂದು ನಿಮಗೆ ವಾರಾಂತ್ಯದಲ್ಲಿ ತಿಳಿಯಲಿದೆ ಎಂದು ಹೇಳುವ ಮೂಲಕ ವೀಕ್ಷಕರ ತಲೆಗೆ ಕೆಲಸ ನೀಡಿದ್ದರು.
ರಾಣಿ ಜಾಗಕ್ಕೆ ಬರುತ್ತಿರುವವರು ಯಾರು ಎಂಬು ಪ್ರಶ್ನೆ ಒಂದೆಡೆ ಆದರೆ ಆಕೆ ಕಿರುತೆರೆಯ ಖ್ಯಾತ ನಟಿ ಪಲ್ಲವಿ ಗೌಡ ಎನ್ನಲಾಗುತ್ತಿದೆ. ಈ ಪಾತ್ರಧಾರಿಗೆ ಸೇಸಮ್ಮ ಎಂದು ಹೆಸರಿಡಲಾಗಿದ್ದುಆಕೆ ಧ್ವನಿ ಕೇಳುತ್ತಿದ್ದರೆ ಅದು ಪಲ್ಲವಿ ಗೌಡ ಎಂದು ಹೇಳಲಾಗುತ್ತಿದೆ. ಜೀ ಕನ್ನಡದ 'ಜೋಡಿಹಕ್ಕಿ' ಧಾರಾವಾಹಿಯಲ್ಲಿ ವಿಲನ್ ನಂದಿತಾ ಆಗಿ ನಟಿಸಿ ಕಿರುತೆರೆ ಪ್ರಿಯರ ಮನ ಸೆಳೆದ ಪಲ್ಲವಿ ಗೌಡ, ಉದಯ ವಾಹಿನಿಯ 'ಸೇವಂತಿ' ಧಾರಾವಾಹಿಯಲ್ಲಿ ಸೇವಂತಿ ಆಗಿ ಅಭಿನಯಿಸಿ ಹೆಸರು ಮಾಡಿದ್ದರು.
ಪಲ್ಲವಿ ಮನೆಯೊಂದು ಮೂರು ಬಾಗಿಲು ಧಾರಾವಾಹಿ ಮೂಲಕ ನಟನಾ ಪಯಣ ಶುರು ಮಾಡಿದ್ದರೂ, ಪೂರ್ಣ ಪ್ರಮಾಣದ ನಾಯಕಿಯಾಗಿ ಭಡ್ತಿ ಪಡೆದದ್ದು ಗಾಳಿಪಟ ಧಾರಾವಾಹಿಯಲ್ಲಿ. ನಂತರ ಚಂದ್ರ ಚಕೋರಿ, ಪರಿಣಯ ಹಾಗೂ ಸೇವಂತಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಈಕೆ 'ಪ್ರೇಮ ಗೀಮ ಜಾನೇ ದೋ' ಮತ್ತು 'ಕೊಡೆ ಮುರುಗ' ಸಿನಿಮಾದಲ್ಲೂ ನಟಿಸಿದ್ದಾರೆ. ಕಾಮಿಡಿ ಪಾತ್ರಕ್ಕೆ ಜೀವ ತುಂಬುವ ಬಯಕೆ ಇದೆ ಎಂದು ಹೇಳಿದ್ದ ಪಲ್ಲವಿ ಗೌಡ, ಮಜಾ ಟಾಕೀಸ್ನಲ್ಲಿ ಇರಲಿದ್ದಾರಾ ಎಂಬ ಪ್ರಶ್ನೆಗೆ ಇಂದು ರಾತ್ರಿ 8 ಗಂಟೆವರೆಗೂ ಕಾದು ನೋಡಬೇಕು.