ಕನ್ನಡ ನಾಡಿನ ಮತ್ತೊಂದು ಪ್ರತಿಭೆ ಪರಭಾಷೆ ಚಿತ್ರಗಳಲ್ಲಿ ಮಿಂಚಲು ರೆಡಿಯಾಗುತ್ತಿದೆ. ಅವರೇ ಜೆ.ಕೆ ಅಂತಲೇ ಫೇಮಸ್ ಆಗಿರೋ ಜಯರಾಂ ಕಾರ್ತಿಕ್.
ಜೆಕೆ ಅನ್ಯಭಾಷೆ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದು ಇದೇ ಮೊದಲಲ್ಲ. ಹಿಂದಿಯಲ್ಲಿ ‘ಸಿಯಾ ಕೆ ರಾಮ್’ ಮೆಗಾ ಧಾರವಾಹಿಯಲ್ಲಿ ರಾವಣನಾಗಿ ಆರ್ಭಟಿಸಿದ ಜೆಕೆ, ಕೆಲವು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಗ ಅವರ ಪ್ರಥಮ ತಮಿಳು ಸಿನಿಮಾ ‘ಮಾಲಿಗೈ’ ಬಿಡುಗಡೆಗೆ ಸಿದ್ಧವಾಗಿದೆ. ಇದೊಂದು ಚಾರಿತ್ರಿಕ ಹಿನ್ನೆಲೆಯುಳ್ಳ ಚಿತ್ರವಂತೆ.
ತಮಿಳು ಚಿತ್ರರಂಗದಲ್ಲಿ ಶಿವಾಜಿ ಗಣೇಶನ್ ಹಾಗೂ ವಾಣಿಶ್ರೀ ಅಭಿನಯದ ‘ವಸಂತ ಮಾಲಿಗೈ (1972)' ಚಿತ್ರ ಬಹಳ ಜನಪ್ರಿಯವಾಗಿತ್ತು. ಈ ಶೀರ್ಷಿಕೆಯಲ್ಲಿಯ ‘ಮಾಲಿಗೈ’ ಆಯ್ಕೆ ಮಾಡಿಕೊಂಡು ಕನ್ನಡದವರೆಯಾದ ದಿಲ್ ಸತ್ಯ ಜೆಕೆ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅವರದೇ ಕಥೆ ಹಾಗೂ ಚಿತ್ರಕಥೆ ಸಹ ಇದೆ. ಕಮಲ್ ಬೋರ ಮತ್ತು ರಾಜೇಶ್ ಕುಮಾರ್ ಚಿತ್ರಕ್ಕೆ ಹಣ ಹಾಕಿದ್ದಾರೆ. ಭವಾನಿ ಎಂಟರ್ಟ್ರೈನ್ಮೆಂಟ್ ಬ್ಯಾನರ್ನಡಿ ಈ ಚಿತ್ರ ತಯಾರಾಗಿದೆ.
ಆಂದ್ರಿಯ ಜೆರಮೈ ಹಾಗೂ ಜಯರಾಂ ಕಾರ್ತಿಕ್ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರದಲ್ಲಿ ಅಶುತೋಶ್ ರಾಣಾ, ಕೆ.ಎಸ್. ರವಿ ಕುಮಾರ್, ಮನೋ ಬಾಲ, ಜಂಗಿರಿ ಮಧುಮಿತ, ಮೀರಾ ಕೃಷ್ಣನ್, ಆದುಕಲಾಮ್ ನರೆನ್, ಅಲಿ ಭಾಷಾ ಹಾಗೂ ಇತರರು ಇದ್ದರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ಮಾಲಿಗೈ’ ಸಿನಿಮಾಕ್ಕೆ ಕನ್ನಡದ ಶ್ರೀ ಕೃಪಾ ಸಂಗೀತ ನೀಡಿದ್ದಾರೆ. ಕೆ ರಾಮ್ ಸಿಂಗ್ ಛಾಯಾಗ್ರಹಣ, ಎ ಸಿ ಎ ಗ್ರೇಸನ್ ಸಂಕಲನ ಚಿತ್ರಕ್ಕಿದೆ.