ಕನ್ನಡ ಕಿರುತೆರೆಯಲ್ಲಿ ಒಂದಷ್ಟು ನಟ ನಟಿಯರು ಬಾಲಕಲಾವಿದರಾಗಿಯೂ ಮಿಂಚಿದ್ದಾರೆ. ಕೆಲವರು ನಟನೆಗೆ ಬಾಯ್ ಹೇಳಿ ಓದಿನ ಕಡೆ ಗಮನ ಹರಿಸಿದರೆ, ಇನ್ನು ಕೆಲವರು ಓದು ಹಾಗೂ ನಟನೆ ಎರಡನ್ನು ಬ್ಯಾಲೆನ್ಸ್ ಮಾಡಿ ಯಶಸ್ವಿಯಾಗಿದ್ದಾರೆ.
ಮಾಸ್ಟರ್ ಕಿಶನ್ -ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಧಾರಾವಾಹಿ ಪಾಪಾ ಪಾಂಡುವಿನಲ್ಲಿ ಪಾಚು ಮತ್ತು ಪಾಂಡುವಿನ ಮಗ ಪುಂಡ ಆಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಹೆಸರುವಾಸಿಯಾಗಿದ್ದ ಕಿಶನ್ ಮತ್ತೆ ಮುಖ ಮಾಡಿದ್ದು ಹಿರಿತೆರೆಯತ್ತ. ತನ್ನ 11ನೇ ವಯಸ್ಸಿನಲ್ಲಿ ಕೇರ್ ಆಫ್ ಫುಟ್ ಪಾತ್ ಸಿನಿಮಾ ನಿರ್ದೇಶಿಸಿ, ನಟಿಸಿದ ಕೀರ್ತಿ ಕಿಶನ್ ರದ್ದು. ಜೊತೆಗೆ ಪ್ರಪಂಚದ ಅತ್ಯಂತ ಕಿರಿಯ ವಯಸ್ಸಿನ ಚಿತ್ರ ನಿರ್ದೇಶಕನೆಂದು ಗಿನ್ನಿಸ್ ದಾಖಲೆಗೆ ಸೇರಿದ್ದಾರೆ ಕಿಶನ್.
ಅಂಕಿತಾ ಅಮರ್ - ಕಲರ್ಸ್ ಕನ್ನಡ ವಾಹಿನಿಯ ನಮ್ಮನೆ ಯುವರಾಣಿಯಲ್ಲಿ ಮೀರಾ ಆಗಿ ಮಿಂಚುತ್ತಿರುವ ಅಂಕಿತಾ, ಬಾಲ ಕಲಾವಿದೆಯಾಗಿ ಗುರುತಿಸಿಕೊಂಡವರು. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಸುಗುಣಾ ಪಾತ್ರ ಮಾಡಿ ವೀಕ್ಷಕರ ಮನ ಸೆಳೆದಿದ್ದ ಅಂಕಿತಾ ಮುಂದೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಿದರು. ನಂತರ ಓದು ಮುಗಿದ ಬಳಿಕ ಕುಲವಧು ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಇದೀಗ ನಮ್ಮೂರ ಯುವರಾಣಿಯಾಗಿ ಮಿಂಚುತ್ತಿದ್ದಾರೆ.