ಹೈದರಾಬಾದ್ (ತೆಲಂಗಾಣ): ಏಕ್ತಾ ಕಪೂರ್ ನಿರ್ಮಾಣ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ನಿರೂಪಣೆಯಲ್ಲಿ ಮೂಡಿಬರಲಿರುವ 'ಲಾಕ್ ಅಪ್' ರಿಯಾಲಿಟಿ ಶೋಗೆ ಕಾನೂನು ತೊಡಕು ಉಂಟಾಗಿದೆ.
ನಾಳೆಯಿಂದ ಲಾಕ್ ಅಪ್ ಶೋ ಬಿಡುಗಡೆಯಾಗಬೇಕಿತ್ತು. ಆದರೆ, ಶೋ ಬಿಡುಗಡೆಗೆ ಹೈದರಾಬಾದ್ನ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಮ್ಮ ಗೇಮ್ ಶೋ ಪರಿಕಲ್ಪನೆಯಿಂದ ಶೋ ಅನ್ನು ಕೃತಿಚೌರ್ಯ ಮಾಡಲಾಗಿದೆ ಎಂದು ಸನೋಬರ್ ಬೇಗ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೈಲು ಪರಿಕಲ್ಪನೆಯ ಕಥೆ ಮತ್ತು ಸ್ಕ್ರಿಪ್ಟ್‌ನ ಏಕೈಕ ಹಕ್ಕುದಾರ ನಾನು ಎಂದು ಬೇಗ್ ತಿಳಿಸಿದ್ದಾರೆ.
ಈ ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್, ಶೋ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇಲ್ಲಿಯವರೆಗಿನ ಶೋ ಪ್ರೋಮೋಗಳಲ್ಲಿ ಫೆಬ್ರವರಿ 27ರಿಂದ ಲಾಕ್ ಅಪ್ ಪ್ರಸಾರವಾಗಲಿದೆ ಎಂದು ತೋರಿಸಲಾಗುತ್ತಿತ್ತು. ಆದರೆ, ಕೋರ್ಟ್ ತಡೆಯಾಜ್ಞೆ ಬಳಿಕ ಹೊಸ ಪ್ರೋಮೋದಲ್ಲಿ 'ಶೀಘ್ರದಲ್ಲೇ ಬರಲಿದೆ' ಎಂದು ತೋರಿಸಲಾಗುತ್ತಿದೆ.
ಇದನ್ನೂ ಓದಿ: 'ಲಾಕ್ ಅಪ್'ನಲ್ಲಿ ಬಂಧಿಯಾದ ಪೂನಂ ಪಾಂಡೆ : ರಣಾವತ್ ಶೋಗೆ ಎಂಟ್ರಿ ಕೊಟ್ಟ ಬೋಲ್ಡ್ ಬ್ಯೂಟಿ
ಇಲ್ಲಿಯವರೆಗೆ ಶೋನಲ್ಲಿ ಕುಸ್ತಿಪಟು ಬಬಿತಾ ಪೋಗಟ್, ಟಿವಿ ನಟರಾದ ನಿಶಾ ರಾವಲ್, ಕರಣ್ವೀರ್ ಬೋಹ್ರಾ, ಪೂನಂ ಪಾಂಡೆ ಮತ್ತು ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫಾರುಕಿ ಭಾಗವಹಿಸುವಿಕೆ ದೃಢಪಟ್ಟಿದೆ. ಈ ಶೋ ಎಲ್ಲ ವರ್ಗಗಳ 16 ಸೆಲೆಬ್ರಿಟಿಗಳನ್ನು ಒಳಗೊಂಡಿದ್ದು, ಸೌಲಭ್ಯಗಳಿಲ್ಲದೆ ತಿಂಗಳುಗಟ್ಟಲೆ ಜೈಲಿನಲ್ಲಿ ಬಂಧಿಯಾಗಲಿದ್ದಾರೆ.