ಬೆಂಗಳೂರು :ಕೋವಿಡ್ ಆರ್ಭಟಕ್ಕೆ ಇಡೀ ಚಿತ್ರರಂಗವೇ ನಲುಗಿದೆ. ಲಾಕ್ಡೌನ್ ಮುಂದುವರಿಯುತ್ತಲೇ ಇರುವುದರಿಂದ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೀಗಾಗಿ, ಬಿಗ್‌ಬಾಸ್ ಸೀಸನ್ 7ರ ಸ್ಪರ್ಧಿ, ನಿರೂಪಕಿ ಚೈತ್ರಾ ವಾಸುದೇವನ್, ಇನ್ ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ. ಈವೆಂಟ್ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದರ ಜೊತೆಗೆ ಮನೆಯಲ್ಲಿ ನಡೆಯುವ ಯಾವುದೇ ಸಮಾರಂಭಗಳಿಗೆ ತೀರಾ ಅಗತ್ಯವಿರುವ ಕೆಲಸಗಾರರನ್ನು ಗುರುತಿಸಿ ಕಾರ್ಯಕ್ರಮದ ಆಯೋಜನೆಗೆ ಅವರನ್ನು ಕಾಯ್ದಿರಿಸಲು ವಿನಂತಿಸಿಕೊಂಡಿದ್ದಾರೆ.
‘ಕೊರೊನಾ ಕಾರಣದಿಂದ ಈವೆಂಟ್ ಮ್ಯಾನೇಜ್‌ಮೆಂಟ್ ಕ್ಷೇತ್ರಕ್ಕೆ ಆಗಿರುವ ಹೊಡೆತ ತುಂಬಾ ದೊಡ್ಡದು. ಸ್ಟೇಜ್ ಆರ್ಟಿಸ್ಟ್ ಹಾಗೂ ತಾಂತ್ರಿಕ ವರ್ಗ ಮತ್ತು ಅದರ ಹಿಂದೆ ಕೆಲಸ ಮಾಡುವಂತಹ ಅದೆಷ್ಟೋ ವ್ಯಕ್ತಿಗಳ ಬಗ್ಗೆ ಯಾರೂ ಕೂಡ ಗಮನ ಹರಿಸದಿರುವುದು ತೀರಾ ಬೇಸರದ ಸಂಗತಿ’ ಎಂದಿದ್ದಾರೆ ಚೈತ್ರಾ ವಾಸುದೇವನ್
"ಈ ಸಮಯದಲ್ಲಿ ಕೇವಲ 50 ಜನರ ಮಿತಿಯಲ್ಲಿ ಕಾರ್ಯಕ್ರಮಗಳನ್ನು ಮಾಡಬೇಕು. ಹೀಗಿದ್ದೂ ನೀವು ಕಡೇ ಪಕ್ಷ ಒಬ್ಬ ಕಲಾವಿದನಿಗಾದರೂ ವೇದಿಕೆಗೆ ಕಾಲಿಡುವ ಅವಕಾಶ ನೀಡಬಹುದು. ಆ ಮೂಲಕ ಆತನಿಗೆ ಸಹಾಯ ಮಾಡಬಹುದು.
ಮಾತ್ರವಲ್ಲ ಇದರಿಂದ ಆ ಕಲಾವಿದನಿಗೆ ಸಹಾಯವಾಗುತ್ತದೆ. ಅದು ಎಂದು ನಿಮಗೆ ಹೊರೆಯಾಗಲಾರದು. ಆ ಕಲಾವಿದ ನಿಮ್ಮ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತರುವುದಂತೂ ನಿಜ. ಇದರಿಂದ ಅವನು ಮಾತ್ರವಲ್ಲದೇ ಅವನ ಕುಟುಂಬದ ಪೋಷಣೆಯನ್ನು ನೀವು ಮಾಡಿದಂತಾಗುತ್ತದೆ" ಎಂದಿದ್ದಾರೆ.