ನಟ ಹರೀಶ್ ರಾಜ್ ಬಹುತೇಕ ಎಲ್ಲರಿಗೂ ಗೊತ್ತು. ಬಿಗ್ಬಾಸ್ನಿಂದ ಬಂದ ನಂತರ ಅವರು ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಕಿರುತೆರೆಯ ಮೂಲಕ ನಟನಾ ಪಯಣ ಆರಂಭಿಸಿದ ಹರೀಶ್ ರಾಜ್ ನಂತರ ಬೆಳ್ಳಿತೆರೆಯಲ್ಲೂ ಅವಕಾಶ ಗಳಿಸಿದರು. ಬಿಗ್ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಹರೀಶ್ ರಾಜ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಭಕ್ತಿಪ್ರಧಾನ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಬಂದ ಹರೀಶ್ ರಾಜ್
ನವೀನ್ ಕೃಷ್ಣ ನಿರ್ದೇಶಿಸುತ್ತಿರುವ 'ಶ್ರೀ ಎಡೆಯೂರು ಸಿದ್ದಲಿಂಗೇಶ್ವರ' ಭಕ್ತಿ ಪ್ರಧಾನ ಧಾರಾವಾಹಿಯಲ್ಲಿ ಹರೀಶ್ ರಾಜ್ ನಟಿಸುತ್ತಿದ್ದಾರೆ. ಈ ಪಾತ್ರ ದೊರೆತಿರುವುದು ನನಗೆ ಬಹಳ ಸಂತೋಷವಾಗಿದೆ ಎಂದು ಹರೀಶ್ ರಾಜ್ ಹೇಳಿಕೊಂಡಿದ್ದಾರೆ.
ಬಿಗ್ಬಾಸ್ನಿಂದ ಬಂದ ನಂತರ ಮಜಾಭಾರತ ಕಾಮಿಡಿ ಶೋನಲ್ಲಿ ಹರೀಶ್ ರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ಒಂದೊಂದು ವಿಭಿನ್ನ ಅವತಾರದ ಮೂಲಕ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ಇದರೊಂದಿಗೆ ನವೀನ್ ಕೃಷ್ಣ ನಿರ್ದೇಶನದ 'ಶ್ರೀ ಎಡೆಯೂರು ಸಿದ್ದಲಿಂಗೇಶ್ವರ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಸೀರಿಯಲ್ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ ಹರೀಶ್ ರಾಜ್. ಶರಣ ಸಂತ ಎಡೆಯೂರು ಸಿದ್ದಲಿಂಗೇಶ್ವರ ಅವರ ಜೀವನಾಧಾರಿತ ಧಾರಾವಾಹಿಯಲ್ಲಿ ಹರೀಶ್ ರಾಜ್ ಸಿದ್ಧಲಿಂಗೇಶ್ವರರ ತಂದೆ ಮಲ್ಲಿಕಾರ್ಜುನ ಆಗಿ ಅಭಿನಯಿಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಹರೀಶ್ ರಾಜ್ "ಸಿದ್ದಲಿಂಗೇಶ್ವರ ಅವರ ತಂದೆ ಮಲ್ಲಿಕಾರ್ಜುನ ಪಾತ್ರ ನಿರ್ವಹಿಸಲಿದ್ದೇನೆ. ಮಗನೊಂದಿಗೆ ಆಧ್ಯಾತ್ಮಿಕ ಒಲವು ಹಾಗೂ ಜ್ಞಾನವನ್ನು ಹೊಂದಿರುವ ತಂದೆಯ ಪಾತ್ರದಲ್ಲಿ ನಾನು ನಿಮ್ಮ ಮುಂದೆ ಬರಲಿದ್ದೇನೆ. ಇಂತಹ ಪಾತ್ರಗಳು ದೊರೆತಾಗ ಇದು ದೈವಿಕ ಎಂದೆನಿಸುತ್ತದೆ. ನಾನು ದೇವರಲ್ಲಿ ತುಂಬಾ ನಂಬಿಕೆ ಹೊಂದಿರುವವನು. ಎಲ್ಲರಿಗೂ ಇಂತಹ ಪಾತ್ರಗಳನ್ನು ಮಾಡಲು ಅವಕಾಶಗಳು ದೊರೆಯುವುದಿಲ್ಲ. ನನಗೆ ದೊರೆತಿರುವುದು ತುಂಬಾ ಖುಷಿಯಾಗುತ್ತಿದೆ. ಸಿನಿಮಾಗಳಲ್ಲಿ ಈ ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ಆದರೆ ಕಿರುತೆರೆಯಲ್ಲಿ ಮೊದಲ ಬಾರಿಗೆ ಭಕ್ತಿಪ್ರಧಾನ ಧಾರಾವಾಹಿ ಮಾಡುತ್ತಿರುವುದು ಖುಷಿ ನೀಡಿದೆ'' ಎಂದಿದ್ದಾರೆ.