ಬೆಳ್ಳಿತೆರೆ ನಟ ನಟಿಯರು ಧಾರಾವಾಹಿಗಳಲ್ಲಿ ಬಂದು ಹೋಗುವುದು ಮಾಮೂಲಿ ಸಂಗತಿ. ಇತ್ತೀಚಿನ ದಿನಗಳಲ್ಲಿ ಅದು ಒಂದು ರೀತಿ ಟ್ರೆಂಡ್ ಆಗಿದೆ. ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಸಿನಿಮಾ ನಟರು ಕಿರುತೆರೆ ನಟ-ನಟಿಯರೊಂದಿಗೆ ಬೆರೆಯುತ್ತಾರೆ.
'ಸಂಘರ್ಷ' ಧಾರಾವಾಹಿ ಮೂಲಕ ಕಿರುತೆರೆಗೆ ಬಂದ ಹರಿಪ್ರಿಯ - Shruti naidu Sangharsha serial
ಶ್ರುತಿ ನಾಯ್ಡು ಅವರ 'ಸಂಘರ್ಷ' ಧಾರಾವಾಹಿಯಲ್ಲಿ ಹರಿಪ್ರಿಯ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತ: ಶ್ರುತಿ ನಾಯ್ಡು ರಿವೀಲ್ ಮಾಡಿದ್ದಾರೆ. ಹರಿಪ್ರಿಯ ನಮ್ಮ ಧಾರಾವಾಹಿಯಲ್ಲಿ ದೇವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಶ್ರುತಿ ನಾಯ್ಡು ಹೇಳಿದ್ದಾರೆ.
ಪ್ರಿಯಾಂಕ ಉಪೇಂದ್ರ, ಆಶಿಕಾ ರಂಗನಾಥ್, ಶರಣ್, ಶ್ರುತಿ, ಅಜಯ್ ರಾವ್, ರಿಷಿ, ಸುಧಾರಾಣಿ ಇವರೆಲ್ಲಾ ಕಿರುತೆರೆಯಲ್ಲಿ ಅತಿಥಿ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಹರಿಪ್ರಿಯ ಸರದಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸಂಘರ್ಷ' ಧಾರಾವಾಹಿಯಲ್ಲಿ ಹರಿಪ್ರಿಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಪ್ರಸಾರವಾಗಲಿರುವ ವಿಶೇಷ ಸಂಚಿಕೆಯಲ್ಲಿ ಹರಿಪ್ರಿಯ ಕಾಣಿಸಿಕೊಳ್ಳಲಿದ್ದಾರೆ. ಸಂಘರ್ಷ ಧಾರಾವಾಹಿಯಲ್ಲಿ ಹರಿಪ್ರಿಯಾ ದೇವಿ ಪಾತ್ರದ ಮೂಲಕ ವೀಕ್ಷಕರ ಮುಂದೆ ಬರುತ್ತಿದ್ದಾರೆ. ಈ ಸಂತಸದ ವಿಚಾರವನ್ನು ನಿರ್ದೇಶಕಿ ಶ್ರುತಿ ನಾಯ್ಡು ಹೇಳಿಕೊಂಡಿದ್ದಾರೆ.
'ಸಂಘರ್ಷ' ಧಾರಾವಾಹಿಯಲ್ಲಿ ನಟಿ ಹರಿಪ್ರಿಯ ದೇವಿ ಪಾತ್ರ ಮಾಡುತ್ತಿರುವುದು ನಿಜಕ್ಕೂ ನಮಗೆ ಖುಷಿಯಾದ ವಿಷಯ. ಇದರಿಂದಾಗಿ ಕಥೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇದರ ಜೊತೆ ಸಂಘರ್ಷದ ಕಥೆಗೆ ಹೊಸ ಟ್ವಿಸ್ಟ್ ಸಿಗಲಿದೆ' ಎಂದು ಹೇಳಿದ್ದಾರೆ ಶ್ರುತಿ ನಾಯ್ಡು. ಹರಿಪ್ರಿಯ ಅವರಿಗೆ ಕಿರುತೆರೆ ಹೊಸತೇನಲ್ಲ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಾಯಕಿ' ಧಾರಾವಾಹಿಯ ಕಥೆ ಹೇಳುವುದಕ್ಕೆ ಹರಿಪ್ರಿಯ ಕಿರುತೆರೆಗೆ ಬಂದಿದ್ದರು. ಆದರೆ ಇದೀಗ ಸಂಘರ್ಷದಲ್ಲಿ ಅಭಿನಯಿಸಲಿದ್ದಾರೆ. ಇತ್ತೀಚೆಗೆ ಯಶಸ್ವಿ ನೂರು ದಿನಗಳನ್ನು ಪೂರೈಸಿರುವ 'ಸಂಘರ್ಷ' ಧಾರಾವಾಹಿಯಲ್ಲಿ ತೇಜಸ್ವಿನಿ ಶೇಖರ್, ರೋಹಿತ್ ರಂಗಸ್ವಾಮಿ ಹಾಗೂ ವನಿತಾ ವಾಸು ಹಾಗೂ ಇನ್ನಿತರರು ನಟಿಸುತ್ತಿದ್ದಾರೆ.