ಜೀ ಕನ್ನಡದಲ್ಲಿ 'ಸರಿಗಮಪ' ಕಾರ್ಯಕ್ರಮದಲ್ಲಿ ಹಲವು ವರ್ಷಗಳಿಂದ ತೀರ್ಪುಗಾರರಾಗಿದ್ದ ಹಿರಿಯ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ಕಲರ್ಸ್ ಕನ್ನಡ ವಾಹಿನಿಯು ಸೆಳೆದಿದ್ದು ಗೊತ್ತೇ ಇದೆ. ರಾಜೇಶ್, ಜೀ ಕನ್ನಡವನ್ನು ಬಿಟ್ಟು ಕಲರ್ಸ್ನ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅದೇ ರೀತಿ ಕಲರ್ಸ್ನಲ್ಲಿ 'ಸೂಪರ್ ಮಿನಿಟ್' ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು ಜೀ ಕನ್ನಡದಲ್ಲಿ ಸದ್ಯದಲ್ಲೇ ಆರಂಭವಾಗಲಿರುವ ಹೊಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಈ ಬಗ್ಗೆ ಸ್ವತಃ ಗಣೇಶ್ ಟ್ವೀಟ್ ಮಾಡಿದ್ದು, ಪ್ರೋಮೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಜೀ ಕನ್ನಡಕ್ಕಾಗಿ ಹೊಸ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ಹೇಳಿದ್ದಾರೆ. ಬಹಳ ದಿನಗಳ ನಂತರ ಜೀ ಕನ್ನಡದ ಮೂಲಕ ಹೊಸ ರಿಯಾಲಿಟಿ ಶೋ ಜೊತೆ ಬರುತ್ತಿದ್ದೇನೆ. ಶೀಘ್ರದಲ್ಲೇ ನಿರೀಕ್ಷಿಸಿ.. ಎಂದು ಹೇಳಿದ್ದಾರೆ.
ಈ ಪ್ರೋಮೋದಲ್ಲಿ ಗಣೇಶೋತ್ಸವವೊಂದರಲ್ಲಿ ಎಲ್ಲರೂ ಗಣೇಶನಿಗೆ ಕಾಯುತ್ತಿರುತ್ತಾರೆ. ಆಗ ಗೋಲ್ಡನ್ ಸ್ಟಾರ್ ಗಣೇಶ್ ಎಂಟ್ರಿ ಕೊಟ್ಟು, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇದೇನು ನೃತ್ಯದ ಕಾರ್ಯಕ್ರಮವಾ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಇದೊಂದು ವಿಭಿನ್ನ ಗೇಮ್ ಶೋ ಎನ್ನಲಾಗಿದ್ದು, ಅದೇನೆಂದು ಸದ್ಯದಲ್ಲೇ ಗೊತ್ತಾಗಲಿದೆ. ಅಕ್ಟೋಬರ್ನಿಂದ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.
ಗಣೇಶ್ ತಮ್ಮ ವೃತ್ತಿಜೀವನ ಪ್ರಾರಂಭಿಸಿದ್ದೇ ಕಿರುತೆರೆಯಿಂದ. ಮೊದಲಿಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ವಠಾರ' ಧಾರಾವಾಹಿಯಲ್ಲಿ ನಟಿಸಿದ ಅವರು, ನಂತರ 'ಕಾಮಿಡಿ ಟೈಮ್'ನಲ್ಲಿ ಮಿಂಚಿದರು. ಅಲ್ಲಿಂದ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಅವರು, ಕಲರ್ಸ್ ಕನ್ನಡಕ್ಕಾಗಿ 'ಸೂಪರ್ ಮಿನಿಟ್' ಕಾರ್ಯಕ್ರಮ ನಡೆಸಿಕೊಟ್ಟರು. ಇದೀಗ ಜೀ ಕನ್ನಡದಲ್ಲಿ ಅವರು ಹೊಸ ಪರ್ವ ಆರಂಭಿಸಲಿದ್ದಾರೆ.
ಇದನ್ನೂ ಓದಿ:ಸಾಯಿ ಧರಂ ತೇಜ್ ರಸ್ತೆ ಅಪಘಾತ ಪ್ರಕರಣ : ಘಟನೆಗೆ ಕಾರಣ ತಿಳಿಸಿದ ಉಪ ಪೊಲೀಸ್ ಆಯುಕ್ತ