ರಂಗಭೂಮಿ, ಕಿರುತೆರೆ, ಸಿನಿಮಾ ನಟ ಹಾಗೂ ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡಿದ್ದವರು ಜಿ ಕೆ ಗೋವಿಂದರಾವ್. ನೇರ ಮಾತು, ಬೇಸ್ ವಾಯ್ಸ್‌ನಿಂದಲೇ ಛಾಪು ಮೂಡಿಸಿದ ಜಿ ಕೆ ಗೋವಿಂದರಾವ್ ಇಂದು ಹುಬ್ಬಳ್ಳಿಯ ಗೋಲ್ಡನ್ ಟೌನ್ ಬಡಾವಣೆಯಲ್ಲಿರುವ ತಮ್ಮ ಪುತ್ರಿಯ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.
"ಮೀನಾ ಮದುವೆ" ನಾಟಕದಲ್ಲಿ ಅಭಿನಯಿಸಿ ಪ್ರಥಮ ಬಹುಮಾನ
ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ರಾರಾಜಿಸಿದ ಜಿ ಕೆ ಗೋವಿಂದರಾವ್, ಸಿನಿಮಾ ಪಯಣ ಶುರುವಾಗಿದ್ದು ಮಾತ್ರ ಅಚ್ಚರಿ. ತಮ್ಮ 12ನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪ್ರವೇಶ ಮಾಡುವ ಮೂಲಕ ಕಲಾವಿದರಾಗಿ ಹೊರ ಹೊಮ್ಮಿದರು. "ಮೀನಾ ಮದುವೆ" ಎಂಬ ನಾಟಕದಲ್ಲಿ ಅಭಿನಯಿಸಿ ಪ್ರಥಮ ಬಹುಮಾನ ಪಡೆದಿದ್ದ ಜಿ ಕೆ ಗೋವಿಂದರಾವ್ಗೆ ಭವಿಷ್ಯದಲ್ಲಿ ಅದ್ಭುತ ನಟನಾಗುವ ಸೂಚನೆ ಆವಾಗಲೇ ಸಿಕ್ಕಿತ್ತು.
ಕಾದಂಬರಿಕಾರರಾಗಿ, ಬರಹಗಾರರಾಗಿ ಹಾಗೂ ಪ್ರಗತಿಪರ ಚಿಂತಕರಾಗಿ ಗುರುತಿಸಿಕೊಂಡಿದ್ದ ಜಿಕೆಜಿ ಅಂಕುರ್ ನಿರ್ದೇಶನದ 'ಸಂಸ್ಕಾರ'ನಾಟಕದಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಗಿರೀಶ್ ಕಾರ್ನಾಡ್ ಅವರ ಹೆಸರಾಂತ ತುಘಲಕ್ ನಾಟಕದಲ್ಲಿ ಅಭಿನಯಿಸಿ ನೋಡುಗರ ನೆನಪಿನಲ್ಲಿ ಉಳಿಯುವಂತೆ ಮಾಡಿದರು. ಇಲ್ಲಿಂದ ಜಿಕೆಜಿ ಅವರಿಗೆ ಕಿರುತೆರೆಯಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬಂದವು.
ಮಾಲ್ಗುಡಿ ಡೇಸ್‌ನಲ್ಲಿಯೂ ನಟಿಸಿದ್ದ ಜಿಕೆಜಿ
ಅದರಲ್ಲೂ ಟಿ ಎನ್ ಸೀತಾರಾಮ್ ನಿರ್ದೇಶನದ ಮುಕ್ತ, ಮಿಂಚು ಸೇರಿ ಸಾಕಷ್ಟು ಧಾರಾವಾಹಿಗಳಲ್ಲಿ ಗೋವಿಂದ ರಾವ್ ನಟಿಸಿದ್ದರು. ಅಷ್ಟೇ ಅಲ್ಲ, ನಟ ಶಂಕರ್ ನಾಗ್ ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ನಲ್ಲಿಯೂ ಗೋವಿಂದರಾವ್ ನಟಿಸಿ ಗಮನ ಸೆಳೆದಿದ್ದರು.