ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕ ಶಿವರಾಮು ಆಗಿ ಅಭಿನಯಿಸುತ್ತಿರುವ ರಿತ್ವಿಕ್, ಇದೇ ಮೊದಲ ಬಾರಿಗೆ ರಗಡ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅರಳು ಹುರಿದಂತೆ ಉತ್ತರ ಕರ್ನಾಟಕದ ಭಾಷೆಯನ್ನು ಮಾತನಾಡುತ್ತಾ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಶಿವರಾಮು ಆಲಿಯಾಸ್ ರಿತ್ವಿಕ್ ಇಂದು ನಟನಾಗಿ ಮಿಂಚುತ್ತಿದ್ದಾರೆ ಎಂದರೆ ಅದಕ್ಕೆ 'ನಿಸರ್ಗ ದೇವತೆ' ನಾಟಕವೇ ಕಾರಣ. ಬಾಲ್ಯದಲ್ಲಿ ರಿತ್ವಿಕ್ ಅವರು ನಿಸರ್ಗ ದೇವತೆ ನಾಟಕದಲ್ಲಿ ನಟಿಸಿದ್ದರು. ಮುಂದೆ ಅದೇ ಅವರನ್ನು ಬಣ್ಣದ ಲೋಕದತ್ತ ಕರೆ ತಂದಿತು. 'ಅನುರೂಪ' ಧಾರಾವಾಹಿಯಲ್ಲಿ ನಾಯಕ ಶ್ಯಾಮ್ ಆಗಿ ಅಭಿನಯಿಸಿರುವ ರಿತ್ವಿಕ್ ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ. ಜಸ್ಟ್ ಲವ್ ಸಿನಿಮಾದಲ್ಲಿ ನಾಯಕನಾಗಿ ಬೆಳ್ಳಿತೆರೆಯಲ್ಲೂ ಕಮಾಲ್ ಮಾಡಿರುವ ರಿತ್ವಿಕ್ ಇತರ ಸಿನಿಮಾಗಳಲ್ಲೂ ನಟಿಸಿದ್ದಾರೆ.
ನಟನೆಗಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ ನಟ ನಟನೆಯ ಸಲುವಾಗಿ ಎಂಎನ್ಸಿ ಉದ್ಯೋಗಕ್ಕೆ ರಿತ್ವಿಕ್ ರಾಜೀನಾಮೆ ನೀಡಿದ್ದಾರೆ. ಬಿಎಸ್ಸಿ ಅನಿಮೇಶನ್ ಕೋರ್ಸ್ ಮಾಡಿರುವ ರಿತ್ವಿಕ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಅವರ ಪ್ರಯತ್ನಕ್ಕೆ ತಕ್ಕಂತೆ ಬೆಂಗಳೂರಿನಲ್ಲಿ ಒಳ್ಳೆ ಕೆಲಸ ಕೂಡಾ ದೊರೆತಿದೆ. ಟೀಂ ಲೀಡರ್ ಆಗಿ ಪ್ರಮೋಷನ್ ಪಡೆದ ರುತ್ವಿಕ್ಗೆ ಬಣ್ಣದ ಲೋಕ ಸೆಳೆಯುತ್ತಲೇ ಇತ್ತು. ಕೆಲವು ದಿನಗಳ ನಂತರ ಕೆಲಸಕ್ಕೆ ಬೈ ಹೇಳಿ ಆ್ಯಕ್ಟಿಂಗ್ನತ್ತ ಮುಖ ಮಾಡಿದರು.
ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಿತ್ವಿಕ್ ನನಗೆ ತೆರೆ ಮೇಲೆ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಬಹಳ ದಿನಗಳಿಂದಲೂ ಇತ್ತು. ಆ ಆಸೆ 'ಗಿಣಿರಾಮ'ನಿಂದಾಗಿ ಈಡೇರಿತು. ಶಿವರಾಮು ಪಾತ್ರದಲ್ಲಿ ಬಹಳ ಥ್ರಿಲ್ ಇದೆ. ಇದು ನನ್ನ ಕನಸಿನ ಪಾತ್ರವಾದ್ದರಿಂದಲೇ ಏನೋ ಈ ಪಾತ್ರಕ್ಕೆ ನನ್ನ ಕೈಲಾದಷ್ಟು ಜೀವ ತುಂಬುತ್ತಿದ್ದೇನೆ ಎನ್ನುತ್ತಾರೆ ರಿತ್ವಿಕ್.