ಸತತ ಐದು ವರುಷಗಳಿಂದ ಕಿರುತೆರೆ ವೀಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದ ಹಾಸ್ಯ ಕಾರ್ಯಕ್ರಮ ಮಜಾ ಟಾಕೀಸ್ ಮುಕ್ತಾಯದ ಹಂತಕ್ಕೆ ಬಂದಿದೆ.
ಹೌದು, ಟಾಕಿಂಗ್ ಸ್ಟಾರ್ ಎಂದೇ ಜನಪ್ರಿಯರಾಗಿರುವ ಮಾತಿನ ಮಲ್ಲ ಸೃಜನ್ ಲೋಕೇಶ್ ಸಾರಥ್ಯದಲ್ಲಿ ವಾರಾಂತ್ಯದಲ್ಲಿ ಕಿರುತೆರೆ ವೀಕ್ಷಕ ಬಳಗವನ್ನು ನಗಿಸುತ್ತಿದ್ದ ಮಜಾ ಟಾಕೀಸ್ ಇದೀಗ ಮುಗಿಯುವ ಹಂತದಲ್ಲಿದೆ.
2015ರಲ್ಲಿ ಆರಂಭವಾದ ಈ ಶೋ ಆರಂಭಿಸುವಾಗ ಕೇವಲ 16 ವಾರಗಳ ಕಾಲ ಎಂದೇ ನಿರ್ಧಾರವಾಗಿತ್ತು. ಆದರೆ ಮಜಾ ಟಾಕೀಸ್ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಿದ ಪರಿಣಾಮ ಇದು 16 ವಾರವನ್ನು ದಾಟಿ ಮುನ್ನುಗ್ಗಿತ್ತು.
ವಾರಾಂತ್ಯದಲ್ಲಿ ಜನರನ್ನು ಬೇರೆಯದ್ದೇ ಪ್ರಪಂಚಕ್ಕೆ ಕೊಂಡೊಯ್ಯುತ್ತಿದ್ದ ಇದು 16 ವಾರ ದಾಟಿ ಬರೋಬ್ಬರಿ 500 ಸಂಚಿಕೆಗಳನ್ನು ದಾಟಿತು.
ಕಿರುತೆರೆಯ ನಾನ್ ಫಿಕ್ಷನ್ ರೇಟಿಂಗ್ ವಿಭಾಗದಲ್ಲೂ ಟಾಪ್ ರೇಡ್ ಪಡೆದ ಮಜಾ ಟಾಕೀಸ್ ಅನ್ನು ನಡೆಸುವುದು ನಿಜಕ್ಕೂ ಸವಾಲಿನ ಕೆಲಸ. ಪ್ರತಿ ವಾರವೂ ಹೊಸ ಹೊಸ ಕಾನ್ಸೆಪ್ಟ್ಗಳ ಮೂಲಕ ವೀಕ್ಷಕರ ಮುಂದೆ ಹಾಜರಿರಬೇಕು. ಅದಕ್ಕಾಗಿ ವಿಶೇಷ ತಯಾರು ಕೂಡಾ ಮಾಡಬೇಕು. ಜೊತೆಗೆ ವಾರ ವಾರ ಹೊಸ ಹೊಸ ಅತಿಥಿಗಳನ್ನು ಕರೆಯಿಸಬೇಕು.
ಇನ್ನು ಪ್ರತಿ ಎಪಿಸೋಡ್ ನಿಮ್ಮ ಮುಂದೆ ಮೂಡಿ ಬಂದಾಗಲೂ ಅದಕ್ಕೆ ಸಾಕಷ್ಟು ತಯಾರು ಮಾಡಲಾಗುತ್ತದೆ. ಅದೇ ಕಾರಣದಿಂದ ಕಿರುತೆರೆ ವೀಕ್ಷಕರಿಗೆ ನಗೆಯ ರಸದೌತಣ ನೀಡಲು ಮಜಾ ಟಾಕೀಸ್ ಬಳಗಕ್ಕೆ ಸಾಧ್ಯವಾಯಿತು.
ಆದರೆ ಇದೀಗ ಸೃಜನ್ ಲೋಕೇಶ್ ಬೆಳ್ಳಿತೆರೆಯಲ್ಲಿ ಸಕ್ರಿಯರಾಗುವ ತಯಾರಿಯಲ್ಲಿದ್ದಾರೆ. ಇದೇ ಕಾರಣದಿಂದ ಮಜಾ ಟಾಕೀಸ್ ಕಾರ್ಯಕ್ರಮವನ್ನು ಮುಗಿಸಲು ಮುಂದಾಗಿದ್ದಾರೆ. ಮಾತ್ರವಲ್ಲ ಬೆಳ್ಳಿತೆರೆಯ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಇವಳು ಸುಜಾತಾ' ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಕೂಡಾ ಸೃಜನ್ ನೋಡಿಕೊಳ್ಳಬೇಕಾಗಿದೆ.