ಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ 7 ನೇ ಸೀಸನ್ ಕಳೆದ ವರ್ಷ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಯಶಸ್ವಿ 7 ಎಪಿಸೋಡ್ಗಳನ್ನು ಪೂರೈಸಿರುವ ಬಿಗ್ಬಾಸ್ 8ನೇ ಸೀಸನ್ ಆರಂಭ ಆಗುವ ಮುನ್ನವೇ ಯಾವ ವಾಹಿನಿಯಲ್ಲಿ ಪ್ರಸಾರವಾಗಬೇಕು ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ.
ಕೊರೊನಾ ವೈರಸ್ ಭೀತಿ ಪರಿಣಾಮ ಕಳೆದ 2 ತಿಂಗಳಿಂದ ದೇಶಾದ್ಯಂತ ಬಹುತೇಕ ಎಲ್ಲಾ ಕ್ಷೇತ್ರಗಳ ಚಟುವಟಿಕೆ ನಿಂತಿದೆ. ಧಾರಾವಾಹಿಗಳ ಫ್ರೆಷ್ ಎಪಿಸೋಡ್ಗಳ ಪ್ರಸಾರ ಕೂಡಾ ನಿಂತಿದ್ದು ಮೊನ್ನೆಯಷ್ಟೇ ಮೇ 25 ರಿಂದ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ಈ ಪರಿಸ್ಥಿತಿಯಲ್ಲಿ ಮುಂದಿನ ಅಕ್ಟೋಬರ್ ಹಾಗೂ ನವೆಂಬರ್ ವೇಳೆಗೆ ಪ್ರಸಾರವಾಗುವ ಬಿಗ್ಬಾಸ್ ಸೀಸನ್ 8 ರ ಬಗ್ಗೆ ಚರ್ಚೆ ಆರಂಭವಾಗಿರುವುದು ಮಾತ್ರ ವಿಪರ್ಯಾಸ.
ಇದುವರೆಗೂ ಪ್ರಸಾರವಾದ ಬಿಗ್ಬಾಸ್ ಎಲ್ಲಾ ಸೀಸನ್ಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಆದರೆ ಕಲರ್ಸ್ ವಾಹಿನಿಯ ಜೊತೆಗೆ ಬಿಗ್ಬಾಸ್ ಮಾಡಿಕೊಂಡಿದ್ದ ಒಪ್ಪಂದ 7ನೇ ಸೀಸನ್ಗೆ ಮುಗಿದು ಹೋಗಿದೆ. ಈಗ 8 ನೇ ಸೀಸನ್ ಪ್ರಸಾರವಾಗುವ ಮುನ್ನ ವಾಹಿನಿಯಲ್ಲಿ ಪ್ರಸಾರ ಮಾಡುವ ಹಕ್ಕು ಪಡೆಯಬೇಕು. ಆದ್ದರಿಂದ ಕನ್ನಡದ ಇತರ ವಾಹಿನಿಗಳು ಬಿಗ್ಬಾಸ್ ಪ್ರಸಾರದ ಹಕ್ಕು ಪಡೆಯಲು ಪೈಪೋಟಿ ನಡೆಸುತ್ತಿವೆ.
2013 ರಲ್ಲಿ ಮೊದಲ ಬಾರಿಗೆ ಈಟಿವಿಯಲ್ಲಿ ಆರಂಭವಾದ ಬಿಗ್ಬಾಸ್ ಕಿರುತೆರೆಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಎರಡನೇ ಸೀಸನ್ ಹಕ್ಕನ್ನು ಸ್ಟಾರ್ ಸುವರ್ಣ ವಾಹಿನಿ ಪಡೆದಿತ್ತು. ಉಳಿದಂತೆ ನಂತರದ 5 ಸೀಸನ್ಗಳು ಕೂಡಾ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಿದ್ದು 8ನೇ ಸೀಸನ್ ಹಕ್ಕನ್ನು ಯಾವ ವಾಹಿನಿಗೆ ನೀಡಬೇಕು ಎಂಬುದರ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ.