ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಕಿರುತೆರೆ ಲೋಕಕ್ಕೆ ಹೊಸಬರೇನಲ್ಲ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯ ನಿರ್ದೇಶಕರಾಗಿರುವ ದಿಲೀಪ್ ರಾಜ್ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ದಿಲೀಪ್ ರಾಜ್ ಅವರು ಮತ್ತೊಂದು ಹೊಸ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲು ತಯಾರಾಗಿದ್ದಾರೆ.
ಹೊಸ ಧಾರಾವಾಹಿ ಮೂಲಕ ಮತ್ತೆ ಆ್ಯಕ್ಟಿಂಗ್ನತ್ತ ಮುಖ ಮಾಡಿದ ದಿಲೀಪ್ ರಾಜ್ - Dileep raj in Hitler kalyana
ಬಹಳ ದಿನಗಳಿಂದ ನಿರ್ದೇಶನ, ನಿರ್ಮಾಣದಲ್ಲೇ ಬ್ಯುಸಿಯಾಗುವ ಮೂಲಕ ಆ್ಯಕ್ಟಿಂಗ್ನಿಂದ ದೂರ ಉಳಿದಿದ್ದ ನಟ ದಿಲೀಪ್ ರಾಜ್ ಇದೀಗ 'ಹಿಟ್ಲರ್ ಕಲ್ಯಾಣ' ಎಂಬ ಹೊಸ ಧಾರಾವಾಹಿ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ದಿಲೀಪ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:'ಫೈಂಡಿಂಗ್ ಅನಾಮಿಕಾ' ಮೂಲಕ ಡಿಜಿಟಲ್ ಜಗತ್ತಿಗೆ ಎಂಟ್ರಿ ಕೊಟ್ಟ ಧಕ್ ಧಕ್ ನಟಿ ಮಾಧುರಿ ದೀಕ್ಷಿತ್
ದಿಲೀಪ್ ತಮ್ಮ ಹೊಸ ಧಾರಾವಾಹಿಗೆ 'ಹಿಟ್ಲರ್ ಕಲ್ಯಾಣ' ಎಂದು ಹೆಸರಿಟ್ಟಿದ್ದು ಈಗಾಗಲೇ ಧಾರಾವಾಹಿ ತಂಡ ಮೊದಲ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ. ಈ ವಿಭಿನ್ನ ರೀತಿಯ ಟೈಟಲ್ ಹಾಗೂ ಪ್ರೋಮೋವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಧಾರಾವಾಹಿ ತೆಲುಗಿನ 'ಹಿಟ್ಲರ್ ಗಾರಿ ಪೆಳ್ಳಾಂ' ರಿಮೇಕ್ ಆಗಿದ್ದು ಕನ್ನಡದ ನೇಟಿವಿಟಿಗೆ ತಕ್ಕಂತೆ ಚಿತ್ರೀಕರಣ ಮಾಡಲಾಗುತ್ತಿದೆ. ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ದಿಲೀಪ್ ರಾಜ್ ಅವರೇ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಜನನಿ, ಅರ್ಧ ಸತ್ಯ, ರಂಗೋಲಿ, ಕುಂಕುಮ ಭಾಗ್ಯ, ಮಾಂಗಲ್ಯ, ಮಳೆಬಿಲ್ಲು, ಪ್ರೀತಿಗಾಗಿ, ರಥಸಪ್ತಮಿ, ಪುರುಷೋತ್ತಮ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ದಿಲೀಪ್ ರಾಜ್ ಇದೀಗ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ವೀಕ್ಷಕರಿಗೆ ಖುಷಿ ತಂದಿದೆ. ಈ ಧಾರಾವಾಹಿಯಲ್ಲಿ ಹೊಸಬರೇ ಕಾಣಿಸಿಕೊಳ್ಳಲಿದ್ದು ಅವರ ಬಗ್ಗೆ ಶೀಘ್ರದಲ್ಲೇ ಮಾಹಿತಿ ದೊರೆಯಲಿದೆ. ಧಾರಾವಾಹಿ ಪ್ರಸಾರದ ದಿನಾಂಕ ಹಾಗೂ ಸಮಯವನ್ನು ವಾಹಿನಿ ಬಹಿರಂಗಪಡಿಸಿಲ್ಲ.