ನಟ, ನಿರ್ದೇಶಕ, ಬರಹಗಾರ ಯತಿರಾಜ್ ಈ ಲಾಕ್ಡೌನ್ ಸಮಯದಲ್ಲಿ ಅನೇಕ ಸಾಮಾಜಿಕ ಸಂದೇಶವುಳ್ಳ ಕಿರುಚಿತ್ರಗಳನ್ನು ತಯಾರಿಸಿ ತಮ್ಮ ಕಲಾವಿಧ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಮಾಡಿದ್ದಾರೆ.
ಇದೀಗ ಯತಿರಾತ್ 'ದೇವದೂತ' ಎಂಬ ಮತ್ತೊಂದು ಕಿರುಚಿತ್ರ ತಯಾರಿಸಿ ನಿನ್ನೆ ಅದನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾದಲ್ಲಿ ವಿಲನ್ ಪಾತ್ರಗಳನ್ನು ಮಾಡುತ್ತಾ ನಿಜಜೀವನದಲ್ಲಿ ಬಡಬಗ್ಗರಿಗೆ ಸಹಾಯ ಮಾಡುತ್ತಾ ರಿಯಲ್ ಹೀರೋ ಎನಿಸಿಕೊಂಡ ಖ್ಯಾತ ನಟ ಸೋನು ಸೂದ್ ಅವರ ಬಗ್ಗೆ ಈ ಬಾರಿ ಯತಿರಾಜ್ ಈ ಕಿರುಚಿತ್ರ ತಯಾರಿಸಿದ್ದಾರೆ.
ಕಡುಬಡತನದ ಕುಟುಂಬವೊಂದು ಬಹಳ ಕಷ್ಟಪಡುತ್ತಿರುತ್ತದೆ. ಒಂದಷ್ಟು ಭೂಮಿ ಇದ್ದರೂ ಉಳಲು ಎತ್ತುಗಳಿಲ್ಲ. ಅಪ್ಪನ ಚಿಂತೆಯನ್ನು ಹೋಗಲಾಡಿಸಲು ಹೆಣ್ಣು ಮಕ್ಕಳು ಧೈರ್ಯ ತುಂಬಿ ತಾವೇ ಎತ್ತುಗಳಂತೆ ಹೊಲ ಉಳುತ್ತಾರೆ. ಇವರೆಲ್ಲಾ ಕಷ್ಟ ಪಡುತ್ತಿರುವುದನ್ನು ಸ್ಥಳೀಯರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ.
'ದೇವದೂತ' ಕಿರುಚಿತ್ರದ ಕಲಾವಿದರು
ಈ ವಿಡಿಯೋ ವೈರಲ್ ಆಗಿ ಸೋನುಸೂದ್ವರೆಗೂ ತಲುಪುತ್ತದೆ. ಆ ರೈತನ ಮೊಬೈಲ್ ನಂಬರ್ ಪಡೆದು ನಿಮಗೆ ಯಾವ ರೀತಿ ಸಹಾಯ ಬೇಕು ಎಂದು ಕೇಳಿದಾಗ ಎರಡು ಎತ್ತುಗಳನ್ನು ಕೊಡಿಸಿ ಎಂದು ಮನೆ ಒಡೆಯ ಕೇಳುತ್ತಾರೆ. ಆದರೆ ಸೋನು ಸೂದ್ ಒಂದು ಹೆಜ್ಜೆ ಮುಂದೆ ಹೋಗಿ ಎತ್ತುಗಳ ಬದಲಿಗೆ ಟ್ರ್ಯಾಕ್ಟರ್ ಕೊಡಿಸುತ್ತಾರೆ. ಸೋನುಸೂದ್ ಅವರ ಈ ಸಹಾಯಕ್ಕೆ ಕುಟುಂಬ ಅವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತದೆ.
ನಟ, ನಿರ್ದೇಶಕ ಯತಿರಾಜ್
ಯತಿರಾಜ್ ಈ ಕಿರುಚಿತ್ರವನ್ನು ಬಹಳ ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ. ಸಾವನದುರ್ಗ, ಮಾಗಡಿ ಬಳಿ ಈ ಕಿರುಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದೆ. ಯತಿರಾಜ್ ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣದ ಜೊತೆಗೆ ರೈತನ ಪಾತ್ರ ಕೂಡಾ ಮಾಡಿದ್ದಾರೆ. ಯಶಿತ, ನಮಿತಾ, ಚಂದನ, ಭಗತ್ ಸಿಂಗ್ ಕೂಡಾ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ.