ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಎಂಟು ವರ್ಷಗಳಿಂದ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿ ಈ ವರ್ಷದ ಆರಂಭದಲ್ಲಿ ಮುಕ್ತಾಯಗೊಂಡಿದೆ.
ಧಾರಾವಾಹಿ ಮುಗಿದು ಜನರು ತಮ್ಮ ನೆಚ್ಚಿನ ಧಾರಾವಾಹಿ ಮುಗಿಯಿತಲ್ಲ ಎಂದು ವೀಕ್ಷಕರು ಬೇಸರದಿಂದಿದ್ದರು. ಧಾರಾವಾಹಿಯ ಕಥಾ ಹಂದರಕ್ಕಿಂತಲೂ ನಾಯಕ ಸಿದ್ಧಾರ್ಥ್, ನಾಯಕಿ ಸನ್ನಿಧಿ ನಡುವಿನ ಪ್ರೇಮವನ್ನ ಕಿರುತೆರೆ ಪ್ರಿಯರು ಮೆಚ್ಚಿಕೊಂಡಿದ್ದರು. ಕುಟುಂಬ ಎಂದರೆ ಹೇಗಿರಬೇಕು, ಕುಟುಂಬದವರು ಹೇಗಿರಬೇಕು ಎಂಬ ಪರಿಕಲ್ಪನೆಯನ್ನು ಕೂಡಾ ಅಗ್ನಿಸಾಕ್ಷಿ ತಿಳಿಸಿಕೊಟ್ಟಿದೆ.
ಅಗ್ನಿಸಾಕ್ಷಿ ಧಾರಾವಾಹಿಯ ಕಲಾವಿದರು ಇದೀಗ ಏನು ಮಾಡುತ್ತಿದ್ದಾರೆ, ಯಾವ ಯಾವ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ ಎಂಬುದನ್ನೆಲ್ಲಾ ನೀವು ತಿಳಿಯಬೇಕಾದರೆ ಮುಂದೆ ಓದಿ.
ವಿಜಯ್ ಸೂರ್ಯ
ಉತ್ತರಾಯಣ ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶ ಮಾಡಿದ ಚಾಕಲೇಟ್ ಹೀರೋ ವಿಜಯ್ ಸೂರ್ಯ ಫೇಮಸ್ ಆದದ್ದು ಸಿದ್ಧಾರ್ಥ್ ಆಗಿ ಬದಲಾದ ಬಳಿಕವೇ. ಗುಳಿ ಕೆನ್ನೆಯ ಚೆಲುವ ಇಂದು ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ ಎಂದರೆ ಅದಕ್ಕೆ ಕಾರಣ ಸಿದ್ಧಾರ್ಥ್ ಪಾತ್ರ. ಏಳು ವರ್ಷಗಳ ಕಾಲ ಸಿದ್ಧಾರ್ಥ್ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ವಿಜಯ್ ಸೂರ್ಯ ಕಾಂಟ್ರ್ಯಾಕ್ಟ್ ಮುಗಿದ ಕಾರಣ ಪಾತ್ರಕ್ಕೆ ಬಾಯ್ ಹೇಳಿದರು.
ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾದ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕ ಸೂರ್ಯಕಾಂತ್ ಪಾತ್ರಕ್ಕೆ ಜೀವ ತುಂಬಿದ ಅವರು, ಈಗ ಅದರಲ್ಲೇ ನಟಿಸುತ್ತಿದ್ದಾರೆ. ಈ ನಡುವೆ ಗ್ಯಾಪ್ನಲ್ಲಿ ಇಷ್ಟಕಾಮ್ಯ ಹಾಗೂ ಕದ್ದುಮುಚ್ಚಿ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ಇದೀಗ ಲಾಕ್ಡೌನ್ ಸಮಯದಲ್ಲಿ ಪತ್ನಿ ಚೈತ್ರಾ ಹಾಗೂ ಮುದ್ದು ಮಗ ಸೋಹನ್ ಸೂರ್ಯನೊಂದಿಗೆ ಕಾಲ ಕಳೆಯುತ್ತಿದ್ದಾರೆ.
ವೈಷ್ಣವಿ ಗೌಡ
ಸನ್ನಿಧಿಯಾಗಿ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಗುಳಿ ಕೆನ್ನೆಯ ಚೆಲುವೆ ವೈಷ್ಣವಿ ಗೌಡ ದೇವಿ ಧಾರಾವಾಹಿಯ ಮೂಲಕ ಕಿರುತೆರೆ ಯಾನ ಶುರು ಮಾಡಿದ್ದರೂ ಅವರಿಗೆ ಜನಪ್ರಿಯತೆ ಸಿಕ್ಕಿದ್ದು ಸನ್ನಿಧಿಯಾಗಿ ಬದಲಾದ ಬಳಿಕವೇ.
ಧಾರಾವಾಹಿ ಮುಗಿದರೂ ಇಂದಿಗೂ ಆಕೆ ಸನ್ನಿಧಿ ಎಂದೇ ಫೇಮಸ್ಸು. ಜನ ಆಕೆಯನ್ನು ಗುರುತಿಸುವುದು ಹಾಗೆಯೇ. ಗಿರ್ಗಿಟ್ಲೆ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಲುವೆ, ಈಗ ನಕ್ಷತ್ರ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಯೋಗ, ಧ್ಯಾನ ಮಾಡುತ್ತಾ ತಮ್ಮ ಫಿಟ್ನೆಸ್ ಕಾಪಾಡುತ್ತಿದ್ದಾರೆ.
ಪ್ರಿಯಾಂಕಾ
ನಾಯಕ, ನಾಯಕಿಯ ಹೊರತಾಗಿ ಅಗ್ನಿ ಸಾಕ್ಷಿಯಲ್ಲಿ ಮನ ಸೆಳೆಯುತ್ತಿದ್ದ ಪಾತ್ರ ವಿಲನ್ ಚಂದ್ರಿಕಾಳದ್ದು. ಚಂದ್ರಿಕಾ ಎಂಬ ಬ್ಯೂಟಿಫುಲ್ ವಿಲನ್ ಪಾತ್ರಕ್ಕೆ ಜೀವ ತುಂಬಿದ ಪ್ರಿಯಾಂಕಾ ನೆಗೆಟಿವ್ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ಮುಂದೆ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಭಾಗವಹಿಸಿದ್ದ ಪ್ರಿಯಾಂಕಾ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ನಂತರ ಒಂದಷ್ಟು ಫೋಟೋ ಶೂಟ್ಗಳಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಸದ್ಯ ತಮಿಳಿನತ್ತ ಮುಖ ಮಾಡಿದ್ದಾರೆ.
ಐಶ್ವರ್ಯ ಸಾಲಿಮಠ್
ನಾಯಕಿ ಸನ್ನಿಧಿಯ ತಂಗಿ ತನು ಆಗಿ ನಟಿಸುತ್ತಿದ್ದ ಶೋಭಾ ಶೆಟ್ಟಿ ಅದ್ಯಾವಾಗ ಪಾತ್ರಕ್ಕೆ ಬಾಯ್ ಹೇಳಿದರೋ ಆಗ ಆ ಪಾತ್ರಕ್ಕೆ ಜೀವ ತುಂಬಲು ಬಂದವರೇ ಐಶ್ವರ್ಯ ಸಾಲಿಮಠ್.
ಅದ್ಭುತ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದ ಐಶ್ವರ್ಯ ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.