'ದಿಯಾ' ಚಿತ್ರದಲ್ಲಿ ರೋಹಿತ್ ಆಗಿ ಬೆಳ್ಳಿತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ದೀಕ್ಷಿತ್ ಶೆಟ್ಟಿ ಕಿರುತೆರೆ ಮೂಲಕ ನಟನಾ ಪಯಣ ಆರಂಭಿಸಿರುವುದು ಹಲವರಿಗೆ ತಿಳಿದಿರುವ ವಿಚಾರ. 'ಪ್ರೀತಿ ಎಂದರೇನು ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಆ್ಯಕ್ಟಿಂಗ್ ಪ್ರಾರಂಭಿಸಿದ್ದ ದೀಕ್ಷಿತ್ ಶೆಟ್ಟಿಗೆ ಕಿರುತೆರೆಯಲ್ಲಿ ಹೆಸರು ತಂದುಕೊಟ್ಟಿದ್ದು ಅರ್ಜುನ್ ಪಾತ್ರ.
ಹಯವದನ ನಿರ್ದೇಶನದ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯಲ್ಲಿ ನಾಯಕ ಅರ್ಜುನ್ ಆಗಿ ನಟಿಸಿ ಕಿರುತೆರೆ ಲೋಕದಲ್ಲಿ ಹೆಸರು ಮಾಡಿರುವ ದೀಕ್ಷಿತ್ ಅವರಿಗೆ ಕಿರುತೆರೆ ಮೇಲೆ ಈಗಲೂ ಅಪಾರ ಪ್ರೀತಿ. 'ನಾಗಿಣಿ' ಧಾರಾವಾಹಿಯಲ್ಲಿ ನಟಿಸಿದ್ದು ನಿಜವಾಗಿಯೂ ನನಗೆ ಒಳ್ಳೆಯ ಅನುಭವ ನೀಡಿದೆ. ಬರೋಬ್ಬರಿ 4 ವರ್ಷಗಳ ಕಾಲ ನಾನು ನಾಗಿಣಿಯ ಭಾಗವಾಗಿದ್ದೆ. ಹಾಗೂ ಅದು 1000 ಸಂಚಿಕೆಗಳನ್ನು ಪೂರೈಸಿದ್ದು ನಿಜವಾಗಿಯೂ ನನಗೆ ಸಂತಸ ತಂದಿತ್ತು.
ನಾಗಿಣಿ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಾಗಿಣಿ ಧಾರಾವಾಹಿ ನಿಜಕ್ಕೂ ಸಾಮಾನ್ಯ ಸಬ್ಜೆಕ್ಟ್ ಆಗಿರಲಿಲ್ಲ. ಅದರಲ್ಲಿ ತುಂಬಾ ಸವಾಲುಗಳಿದ್ದವು. ಕೆಲವೊಮ್ಮೆ ಪ್ರತಿದಿನ ನಾವು ಸರಾಗವಾಗಿ 48 ಗಂಟೆಗಳ ಕಾಲ ನೇರವಾಗಿ ಚಿತ್ರೀಕರಿಸಿದ್ದೂ ಇತ್ತು' ಎಂದು ಹಳೆಯ ನೆನಪುಗಳನ್ನು ಬಿಚ್ಚಿಡುತ್ತಾರೆ ದೀಕ್ಷಿತ್. 'ಇಂದು ನಾನು ಬೆಳ್ಳಿತೆರೆಯಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಕಿರುತೆರೆ, ಅದರಲ್ಲೂ 'ನಾಗಿಣಿ ' ಧಾರಾವಾಹಿಯೇ ಪ್ರಮುಖ ಕಾರಣ. 'ನಾಗಿಣಿ' ನನಗೆ ದೊಡ್ಡ ವೇದಿಕೆಯಾಗಿತ್ತು ಎಂದರೆ ಸುಳ್ಳಲ್ಲ. ನಾನು ನಟನಾಗಿ ಆ ಧಾರಾವಾಹಿಯಿಂದ ಸಾಕಷ್ಟು ಸಂಗತಿಗಳನ್ನು ಕಲಿತಿದ್ದೇನೆ. ಅದೇ ಕಾರಣಕ್ಕೆ ನಾನು ಸದಾ ಕಾಲ 'ನಾಗಿಣಿ' ಧಾರಾವಾಹಿಗೆ ಹಾಗೂ ಟಿವಿ ಕ್ಷೇತ್ರಕ್ಕೆ ತುಂಬಾ ಋಣಿಯಾಗಿದ್ದೇನೆ. ಇಂದು ನಾನು ಎಲ್ಲಿ ಹೋದರೂ ಜನ ನನ್ನನ್ನು ನಾಗಿಣಿ ಧಾರಾವಾಹಿಯ ಅರ್ಜುನ್ ಎಂದೇ ಗುರುತಿಸುತ್ತಾರೆ. ಒಟ್ಟಿನಲ್ಲಿ ಈ ಧಾರಾವಾಹಿ ನನ್ನ ಬಣ್ಣದ ಬದುಕಿಗೆ ಬಹು ದೊಡ್ಡ ಬ್ರೇಕ್ ನೀಡಿತು' ಎಂದಿದ್ದಾರೆ.
'ದಿಯಾ' ಚಿತ್ರದ ರೋಹಿತ್ ಪಾತ್ರದಲ್ಲಿ ಮಿಂಚಿದ ನಟ 'ದಿಯಾ' ಸಿನಿಮಾದ ನಂತರ ಬೆಳ್ಳಿತೆರೆಯಲ್ಲೇ ಬ್ಯುಸಿಯಾಗಿರುವ ದೀಕ್ಷಿತ್, ಕೆಟಿಎಂ, ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿದ್ಯಾ ಬಿ . ರೆಡ್ಡಿ ನಿರ್ದೇಶನ ದ್ವಿಭಾಷಾ ಕಿರುಚಿತ್ರ 'ಓ ಫಿಶ್' ನಲ್ಲಿ ದೀಕ್ಷಿತ್, ಜೈ ಜಗದೀಶ್ ಪುತ್ರಿ ವೈನಿಧಿ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಈ ಕಿರುಚಿತ್ರದ ಹಾಡುಗಳು ಸಂಗೀತಪ್ರಿಯರ ಮನಸೆಳೆದಿತ್ತು.