ಕನ್ನಡ ಕಿರುತೆರೆಯಲ್ಲಿ ಮತ್ತೆ ರಿಯಾಲಿಟಿ ಶೋಗಳ ದರ್ಬಾರ್ ಶುರುವಾಗಲಿದೆ. ಇಷ್ಟು ದಿನ ಲಾಕ್ಡೌನ್ನಿಂದಾಗಿ ಸ್ಥಗಿತವಾಗಿದ್ದ ಶೋಗಳು ಇದೀಗ ಒಂದೊಂದಾಗಿ ಕಿರುತೆರೆಗೆ ಲಗ್ಗೆ ಇಡುತ್ತಿವೆ. ನವಿರಾದ ಹಾಸ್ಯದಿಂದ ಜನಮನ ಗೆದ್ದ ಕಾಮಿಡಿ ಕಿಲಾಡಿಗಳು ಇದೀಗ ಮತ್ತೊಮ್ಮೆ ತೆರೆ ಮೇಲೆ ಬರಲು ರೆಡಿಯಾಗಿದೆ.
ಶೀಘ್ರದಲ್ಲೇ ಬರುತ್ತಿದೆ ಕಾಮಿಡಿ ಕಿಲಾಡಿಗಳು ಚಾಂಪಿಯನ್ಶಿಪ್- 2 - ರಿಯಾಲಿಟಿ ಶೋ
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಚಾಂಪಿಯನ್ಶಿಪ್-2 ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ. ಕಳೆದ ಮೂರು ಸೀಸನ್ಗಳ ಕಲಾವಿದರು ಚಾಂಪಿಯನ್ಶಿಪ್-2ರಲ್ಲಿ ಭಾಗವಹಿಸಲಿದ್ದಾರೆ.
ಝೀ ಕನ್ನಡದ ಕಾಮಿಡಿ ಕಿಲಾಡಿಗಳು ಚಾಂಪಿಯನ್ಶಿಪ್- 2 ಶೀಘ್ರದಲ್ಲೇ ಆರಂಭವಾಗಲಿದೆ. ಆ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸಲು ಝೀ ಕನ್ನಡ ಸಜ್ಜಾಗಿದೆ. ಜನಪ್ರಿಯ ಶೋ ಆಗಿರುವ ಕಾಮಿಡಿ ಕಿಲಾಡಿಗಳು ಮೂರು ಸೀಸನ್ಗಳನ್ನು ಯಶಸ್ವಿಯಾಗಿ ಮುಗಿಸಿತ್ತು. ಈ ಮೂಲಕ ಎಲೆಮರೆ ಕಾಯಿಯಂತಿದ್ದ ಹಲವು ಪ್ರತಿಭೆಗಳನ್ನು ಮುನ್ನೆಲೆಗೆ ತಂದಿದೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಭಾಗವಹಿಸಿದ್ದ ಹಲವು ಪ್ರತಿಭೆಗಳು ಇಂದು ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಕಾಮಿಡಿ ಸಂಸ್ಥಾನದ ದಿಗ್ಗಜರ ಯಜಮಾನಿಕೆಯಲ್ಲಿ ನಗುವಿನ ಮಹಾಯುದ್ಧವನ್ನೇ ನಡೆಸಲು ಈ ಮೂರು ಸೀಸನ್ನ ಕಾಮಿಡಿ ಕಲಾವಿದರು ಸಜ್ಜಾಗಿದ್ದಾರೆ. ಈಗಾಗಲೇ ಕಾಮಿಡಿ ಕಿಲಾಡಿಗಳು ಚಾಂಪಿಯನ್ಶಿಪ್-2 ರ ಪ್ರೋಮೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಮಾಸ್ಟರ್ ಆನಂದ್ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಚಾಂಪಿಯನ್ಶಿಪ್ನಲ್ಲಿ ನಿರ್ದೇಶಕ ಯೋಗರಾಜ್ ಭಟ್, ನವರಸ ನಾಯಕ ಜಗ್ಗೇಶ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.