ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗಕ್ಕೆ ಬರುವವರಿಗೆ ಆಲ್ಬಂ ಸಾಂಗ್ ಹಾಗೂ ಶಾರ್ಟ್ ಫಿಲಂ ಮೇಕಿಂಗ್ ಒಂದು ಪ್ಲಾಟ್ಪಾರಂ ಆಗುತ್ತಿದೆ. ಇದರಲ್ಲಿ ತಮ್ಮ ಪ್ರತಿಭಾವಂತಿಕೆ ತೋರಿಸಿದರೆ ಅಂಥವರಿಗೆ ಮುಂದೆ ಸಿನಿಮಾ ರಂಗದಲ್ಲಿ ಖಂಡಿತ ಅವಕಾಶ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಅದೇ ಹಾದಿಯಲ್ಲಿ ಸಾಗುತ್ತಿರುವ ರಾಮ್‌ಕಿರಣ್, ಇದೀಗ ಪಾರಿವಾಳ ಎಂಬ ಆಲ್ಬಂ ವಿಡಿಯೋ ಸಾಂಗ್ ಅನ್ನು ಮಾಡಿದ್ದಾರೆ.
ಚಿನ್ನಿಪ್ರಕಾಶ್ ಅವರ ಶಿಷ್ಯ, ಮೂಲತಃ ನೃತ್ಯ ಸಂಯೋಜಕರಾದ ರಾಮ್‌ಕಿರಣ್ ಈ ವಿಡಿಯೋ ಆಲ್ಬಂಗೆ ಅವರೇ ನೃತ್ಯ ನಿರ್ದೇಶನ ಮಾಡಿ, ನಟನೆಯನ್ನೂ ಮಾಡಿದ್ದಾರೆ. ವಿಶೇಷವಾಗಿ ಈ ಹಾಡನ್ನು ಸಿಂಗಲ್ ಟೇಕ್‍ನಲ್ಲಿ ಕ್ಯಾಮೆರಾಮನ್ ಅಭಿಷೇಕ್ ಜಿ.ಕಾಸರಗೋಡು ಸೆರೆ ಹಿಡಿದಿದ್ದು, ಅಗಸ್ತ್ಯ ಸಂತೋಷ್ ಇದರ ಸಾಹಿತ್ಯ ರಚಿಸಿ ರಾಗ ಸಂಯೋಜನೆ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಈ ಪಾರಿವಾಳದ ಹಾಡು ಬಿಡುಗಡೆ ಆಗಿಲಿದ್ದು, ಸದ್ಯ ಕನ್ನಡ ಹಾಡು ಮಾತ್ರ ಹೊರ ಬಂದಿದೆ. ಇತ್ತೀಚೆಗಷ್ಟೇ ಪಬ್ಲಿಕ್ ಟಾಯ್ಲೆಟ್ ಎನ್ನುವ ಕಿರುಚಿತ್ರ ನಿರ್ಮಿಸಿದ ಭಾನವಿ ಕ್ಯಾಪ್ಚರ್ ಸಂಸ್ಥೆ ಈ ವಿಡಿಯೋ ಸಾಂಗ್ಗೆ ಹಣ ಹೂಡಿದೆ.
ಮುಂದಿನ ದಿನಗಳಲ್ಲಿ ಪ್ರತಿವಾರ ಒಂದೊಂದು ಭಾಷೆಯ ಹಾಡನ್ನು ರಿಲೀಸ್ ಮಾಡುವ ಯೋಜನೆಯನ್ನು ಈ ತಂಡ ಹಮ್ಮಿಕೊಂಡಿದೆ. ಇನ್ನು ಎಲ್ಲ ಭಾಷೆಯಲ್ಲೂ ಗಾಯಕ ಶಶಾಂಕ್ ಶೇಷಗಿರಿ ಅವರೇ ಹಾಡಿದ್ದಾರೆ. ನಾಯಕ ರಾಮ್‍ಕಿರಣ್ ಹಾಗೂ ನಾಯಕಿ ತೇಜಸ್ವಿನಿ ಶರ್ಮಾ ಅವರ ಅಭಿನಯ ಇರುವ ಭಾನವಿ ಕ್ಯಾಪ್ಚರ್ ನಿರ್ಮಾಣದ ಈ ಹಾಡಿನ ಸಾಹಿತ್ಯದಲ್ಲಿ ಭಗ್ನ ಪ್ರೇಮಿಯೊಬ್ಬನ ಮನದ ವಿರಹವೇದನೆಯನ್ನು ಹೇಳಲು ಪ್ರಯತ್ನಿಸಲಾಗಿದೆ. ಅರುಣ್ ಬಸವರಾಜ್ ಜೊತೆಗೆ ರೋಹಿತ್ ಕಾರ್ಯಕಾರಿ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.