ಕೆಲವೊಮ್ಮೆ ನಾವು ಬಣ್ಣದ ಲೋಕದಲ್ಲಿ ಮಿಂಚಬೇಕು ಎಂದು ಕೆಲವರು ಆಸೆ ಪಟ್ಟರೆ ಮತ್ತೆ ಕೆಲವರ ವಿಚಾರದಲ್ಲಿ ತಮ್ಮ ಮಕ್ಕಳು ಬಣ್ಣದ ಲೋಕದಲ್ಲಿ ಹೆಸರು ಮಾಡಬೇಕು ಎಂದು ತಂದೆ ತಾಯಿಗಳೇ ಕನಸು ಕಾಣುತ್ತಾರೆ. ರಿಶಾ ನಿಜಗುಣ ವಿಚಾರದಲ್ಲಿ ಕೂಡಾ ಆಗಿದ್ದು ಇದೇ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕ ವಸಂತನ ತಂಗಿ ಸುಮ ಆಗಿ ಅಭಿನಯಿಸುತ್ತಿರುವ ರಿಶಾ, ತಂದೆ ತಾಯಿ ಆಸೆಯನ್ನು ನೆರವೇರಿಸಲು ಹುಟ್ಟೂರು ಚಿತ್ರದುರ್ಗದಿಂದ ಬೆಂಗಳೂರು ಬಸ್ ಹತ್ತಿದರು. ನಟನೆಯನ್ನು ಕಲಿಯುವ ಸಲುವಾಗಿ ಕಲಾತ್ಮಕ ಎನ್ನುವ ಹವ್ಯಾಸಿ ನಾಟಕ ತಂಡ ಸೇರಿದರು. ಅಲ್ಲಿ ನಟನೆಯ ರೀತಿ ನೀತಿಗಳನ್ನು ಚೆನ್ನಾಗಿ ಕಲಿತ ರಿಶಾ, ಪ್ರಾರಬ್ಧ ಕರ್ಮ ಹಾಗೂ ಗಡಿಯಂಕ ಕುಡಿಯುದ್ಧ ಎಂಬ ನಾಟಕಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಒಂದಷ್ಟು ನಾಟಕಗಳಲ್ಲಿ ನಟಿಸಿದ ರಿಶಾ ನಂತರ ಸೀದಾ ಹಾರಿದ್ದು ಹಿರಿತೆರೆಗೆ.
ಅಪ್ಪ ಅಮ್ಮನ ಆಸೆ ಈಡೇರಿಸಲು ಬಣ್ಣದ ಲೋಕಕ್ಕೆ ಬಂದ ನಟಿ 'ಡಿಕೆ ಬೋಸ್' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ ರಿಶಾ ಅವರಿಗೆ ಮತ್ತೆ ಸಿನಿರಂಗದಿಂದ ಒಳ್ಳೆಯ ಆಫರ್ ಬರಲಿಲ್ಲ. ಇನ್ನೇನು ಮಾಡೋದು ಎಂದು ಯೋಚಿಸುತ್ತಿರುವಾಗ ರಿಶಾಗೆ ಕಿರುತೆರೆಯಿಂದ ಆಫರ್ ಬಂತು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೌಟುಂಬಿಕ ಕಥಾ ಹಂದರವುಳ್ಳ ಧಾರಾವಾಹಿ 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ರಕ್ಷಿತಾ ಆಗಿ ನಟಿಸುವ ಮೂಲಕ ಕಿರುತೆರೆ ಲೋಕಕ್ಕೆ ಬಂದ ರಿಶಾ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದರು.
ಬೆಳ್ಳಿ ತೆರೆಯಲ್ಲೂ ಮಿಂಚಿರುವ ರಿಶಾ "ನನಗೆ ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳಬೇಕು ಎಂದು ಸಣ್ಣ ಆಸೆಯಿತ್ತು, ನಿಜ. ಆದರೆ ನನ್ನ ಪೋಷಕರಿಗೆ ಹಾಗೂ ತಮ್ಮನಿಗೆ ಅದೇ ದೊಡ್ಡ ಕನಸಾಗಿತ್ತು. ಅದೇ ಕಾರಣದಿಂದ ನಟನಾ ಲೋಕಕ್ಕೆ ಬಂದಿರುವ ನನಗೆ ಇಂದು ಅವರೆಲ್ಲರ ಕನಸು ನನಸು ಮಾಡಿದ ಸಂತಸವಿದೆ" ಎಂದು ಹೇಳುವ ರಿಶಾ ಈಗ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಎವರ್ ಗ್ರೀನ್ ಹೀರೋ ಅನಂತ್ ನಾಗ್ ಜೊತೆ ನಟಿಬೇಕು ಎನ್ನುವುದು ರಿಶಾ ಕನಸಂತೆ.