ಚಂದನ್ ಶೆಟ್ಟಿ, ತಮ್ಮ ವಿಭಿನ್ನ ರ್‍ಯಾಪ್ ಹಾಡುಗಳ ಮೂಲಕವೇ ಸಂಗೀತ ಪ್ರಿಯರ ಮನಗೆದ್ದ ಸಂಗೀತ ನಿರ್ದೇಶಕ. ಬಿಗ್ ಬಾಸ್ಗೆ ಬರುವ ಮುನ್ನ ಚಂದನ್ ಶೆಟ್ಟಿ ಬಗ್ಗೆ ಯಾರಿಗೂ ಹೆಚ್ಚಾಗಿ ತಿಳಿದಿರಲಿಲ್ಲ. ಆದರೆ ಬಿಗ್ ಬಾಸ್ನಲ್ಲಿ ಭಾಗವಹಿಸಿದ ಬಳಿಕವಷ್ಟೇ ಚಂದನ್ ಶೆಟ್ಟಿ ಪ್ರತಿಭೆ ಏನೆಂಬುದು ಎಲ್ಲರಿರೂ ತಿಳಿಯಿತು.
ಬದಲಾವಣೆಗಳೊಂದಿಗೆ ಮತ್ತೆ ಬಿಡುಗಡೆಯಾಯ್ತು 'ಕೋಲುಮಂಡೆ' ಹಾಡು
ಗೌರಿ ಹಬ್ಬದಂದು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದ 'ಕೋಲುಮಂಡೆ' ಹಾಡಿಗೆ ಆಕ್ಷೇಪ ವ್ಯಕ್ತವಾಗಿದ್ದರಿಂದ ಆ ಹಾಡು ಯೂಟ್ಯೂಬ್ನಿಂದ ಡಿಲೀಟ್ ಆಗಿತ್ತು. ಆದರೆ ಇದೀಗ ಮತ್ತೆ ಕೆಲವೊಂದು ಬದಲಾವಣೆಗಳೊಂದಿಗೆ ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ.
ಇನ್ನು ಚಂದನ್ ಶೆಟ್ಟಿ ಇತ್ತೀಚೆಗೆ ಬಿಡುಗಡೆ ಮಾಡಿದ್ದ 'ಕೋಲುಮಂಡೆ' ಹಾಡು ವಿವಾದಕ್ಕೆ ಒಳಗಾಗಿದ್ದು ಗೊತ್ತಿರುವ ವಿಚಾರ. ಈ ಹಾಡು ಬಿಡುಗಡೆಯಾದಾಗ ಮೈಸೂರು, ಚಾಮರಾಜನಗರ ಭಾಗದ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಾಡಿನಲ್ಲಿ ಶರಣೆ ಸಂಕಮ್ಮ ಅವರನ್ನು ಅಶ್ಲೀಲವಾಗಿ ತೋರಿಸಲಾಗಿದೆ. ಈ ಮೂಲಕ ಮಹದೇಶ್ವರ ಭಕ್ತರ ಭಾವನೆಗಳಿಗೆ ಚಂದನ್ ಶೆಟ್ಟಿ ಧಕ್ಕೆಯುಂಟುಮಾಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಯ್ತು. ಆಗ ಚಂದನ್ ಶೆಟ್ಟಿ ಯೂಟ್ಯೂಬ್ನಿಂದ ಹಾಡನ್ನು ಡಿಲೀಟ್ ಮಾಡಿದ್ದರು. ಕೆಲವರು ಚಂದನ್ ಶೆಟ್ಟಿ ಪರವಾಗಿ ಕೂಡಾ ನಿಂತಿದ್ದರು.
ಇದೀಗ ಚಂದನ್ ಶೆಟ್ಟಿ ಮತ್ತೆ ಕೋಲುಮಂಡೆ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಮೂಲಕ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದ್ದಾರೆ. ಆದರೆ ಇದು ಲಿರಿಕಲ್ ವಿಡಿಯೋ ಹಾಡಾಗಿದ್ದು ವಿಡಿಯೋ ಬದಲಿಗೆ ಚಂದನ್ ಶೆಟ್ಟಿಯ ಕೆಲವೊಂದು ಫೋಟೋಗಳಿವೆ. ಕೋಲುಮಂಡೆ ಹಾಡು ಮತ್ತೊಮ್ಮೆ ಬಿಡುಗಡೆಯಾಗಿರುವುದಕ್ಕೆ ಚಂದನ್ ಶೆಟ್ಟಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.