ಶ್ರುತಿ ನಾಯ್ಡು ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಬ್ರಹ್ಮಗಂಟು' ಇತ್ತೀಚೆಗಷ್ಟೇ ಯಶಸ್ವಿ ಮೂರು ವರ್ಷ ಪೂರೈಸಿತ್ತು. ವಿಭಿನ್ನ ಕಥಾ ಹಂದರವುಳ್ಳ ಬ್ರಹ್ಮಗಂಟು ಧಾರಾವಾಹಿ ಕಳೆದ ಮೂರು ವರ್ಷಗಳಿಂದ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಇದೀಗ ಈ ಧಾರಾವಾಹಿ ಮುಗಿಯುವ ಹಂತದಲ್ಲಿದೆ.
ಈಗಾಗಲೇ 'ಬ್ರಹ್ಮಗಂಟು' ಧಾರಾವಾಹಿ ಕೊನೆಯ ಶೂಟಿಂಗ್ ಮುಗಿಸಿದ್ದು ಕ್ಲೈಮ್ಯಾಕ್ಸ್ ಸಂಚಿಕೆಗಳು ಸದ್ಯದಲ್ಲೇ ಪ್ರಸಾರವಾಗಲಿದೆ. ಪರೋಪಕಾರದ ಮನೋಭಾವ ಹೊಂದಿರುವ ಹುಡುಗಿ ಗೀತಾ ಆಲಿಯಾಸ್ ಗುಂಡಮ್ಮ ಯಾರೇ ಕಷ್ಟ ಎಂದು ಬರಲಿ, ಸಹಾಯ ಮಾಡುತ್ತಾಳೆ. ತನ್ನಿಂದ ಸಾಧ್ಯವಾದಷ್ಟು ಪರರಿಗೆ ಉಪಕಾರ ಮಾಡುವ ಚೆಲುವೆಗೆ ಜೀವನದಲ್ಲಿ ಇದ್ದದ್ದು ಒಂದೇ ಕನಸು. ತನ್ನ ಕೈ ಹಿಡಿಯುವ ಹುಡುಗ ಸುಂದರನಾಗಿರಬೇಕು ಎಂಬುದೇ ಆಕೆಗಿದ್ದ ಕನಸು. ಆಕೆಯ ಕನಸೇನೋಈಡೇರಿತು. ಆದರೆ ಅವಳನ್ನು ಕೈ ಹಿಡಿದ ಲಕ್ಕಿಗೆ ಅವಳೆಂದರೆ ಅಷ್ಟಕಷ್ಟೆ. ವಿರುದ್ಧ ದಿಕ್ಕಿನಲ್ಲಿ ಯೋಚಿಸುವ ಗಂಡು-ಹೆಣ್ಣು ಜೊತೆಯಾದಾಗ ಏನಾಗುತ್ತದೆ, ನಾಯಕ ಲಕ್ಕಿಗೆ ಗುಂಡಮ್ಮನ ಮೇಲೆ ಪ್ರೀತಿ ಮೂಡಿದ್ದು ಹೇಗೆ, ರೂಪವೇ ಮುಖ್ಯ ಎಂದು ಭಾವಿಸಿದ್ದ ಲಕ್ಕಿ ಮಡದಿ ಗೀತಾಳನ್ನು ಸ್ವೀಕರಿಸಿದ್ದು ಹೇಗೆ ಎಂಬ ವಿಭಿನ್ನ ಕಥಾ ಹಂದರದ 'ಬ್ರಹ್ಮಗಂಟು' ಧಾರಾವಾಹಿ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ.