ಪ್ರಸ್ತುತ ಭಾರತದಲ್ಲಿ ಕೋವಿಡ್ 19 ಎರಡನೇ ಅಲೆ ಹೆಚ್ಚಾಗುತ್ತಿದೆ. ಮುಂದಿನ ವಾರ ತಗ್ಗುವ ಸಾಧ್ಯತೆಯಿದೆ ಎಂದು ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ನಮ್ಮ ಆರೋಗ್ಯ ವ್ಯವಸ್ಥೆಗಳು ತೀವ್ರ ಸವಾಲುಗಳನ್ನು ಎದುರಿಸುತ್ತಿವೆ. ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದ ಹಿಡಿದು ಆಮ್ಲಜನಕದ ಪೂರೈಕೆಯ ಕೊರತೆಯವರೆಗೆ ಇಡೀ ರಾಷ್ಟ್ರವು ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಈ ಸಾಂಕ್ರಾಮಿಕ ರೋಗದ ಮಧ್ಯೆ ಸ್ಯಾಂಡಲ್ವುಡ್ ನಟಿ ಯಮುನಾ ಶ್ರೀನಿಧಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಬೇಕು ಎಂದು ಜನರನ್ನು ಕೋರಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ರಕ್ತದಾನ ಮಾಡಿದ ಯಮುನಾ ಶ್ರೀನಿಧಿ ಮಾತನಾಡಿ, ಈ ಸಮಯದಲ್ಲಿ ಬ್ಲಡ್ ಬ್ಯಾಂಕುಗಳು ತೀವ್ರ ರಕ್ತದ ಕೊರತೆ ಎದುರಿಸುತ್ತಿವೆ. ಆದ್ದರಿಂದ ರಕ್ತದಾನಿಗಳು ರಕ್ತದಾನ ಮಾಡಬೇಕಿದೆ. ನಾನು 18 ವರ್ಷವಿದ್ದಾಗ ಎನ್ಸಿಸಿ ಸೇರಿಕೊಂಡೆ. ಅಂದಿನಿಂದ ನನಗೆ ಸಮಾಜದ ಬಗ್ಗೆ ಕಾಳಜಿಯಿದೆ ಎಂದು ಅವರು ಹಂಚಿಕೊಂಡಿದ್ದಾರೆ.
ಕೋವಿಡ್ 19 ಜನರು ಇದೀಗ ಎದುರಿಸುತ್ತಿರುವ ಏಕೈಕ ಬಿಕ್ಕಟ್ಟು. ಆದ್ದರಿಂದ ಈ ಸಮಯದಲ್ಲಿ ನಾನು ರಕ್ತದಾನ ಮಾಡಲು ಮುಂದಾದೆ. ತುರ್ತು ಹೃದಯ ಶಸ್ತ್ರಚಿಕಿತ್ಸೆಗಳು, ಕ್ಯಾನ್ಸರ್ ಚಿಕಿತ್ಸೆಗಳು, ಆಕಸ್ಮಿಕ ತುರ್ತು ಪರಿಸ್ಥಿತಿಗಳು, ತುರ್ತು ಹೆರಿಗೆ ಶಸ್ತ್ರಚಿಕಿತ್ಸೆಗಳಿಗೆ ರಕ್ತದ ಅವಶ್ಯಕತೆಯಿದೆ. ಬ್ಲಡ್ ಬ್ಯಾಂಕುಗಳು ಈ ಸಮಯದಲ್ಲಿ ಜೀವಗಳನ್ನು ಉಳಿಸಲು ರಕ್ತ ಪೂರೈಕೆಯ ಅಗತ್ಯವಿರುತ್ತದೆ, ಎಂದು ಯಮುನಾ ತಿಳಿಸಿದ್ದಾರೆ.
ಈ ಕಠಿಣ ಸಮಯದಲ್ಲಿ ರಕ್ತದ ಅಗತ್ಯವಿರುವವರಿಗೆ ಸಹಾಯ ಮಾಡಬೇಕೆಂದು ಒತ್ತಾಯಿಸಿರುವ ಯಮುನಾ, ಲಸಿಕೆ ಪಡೆಯುವ ಮೊದಲು ರಕ್ತದಾನ ಮಾಡುವ ಅಗತ್ಯತೆಯ ಬಗ್ಗೆಯೂ ಅವರು ಬೆಳಕು ಚೆಲ್ಲಿದರು. ಕೋವಿಡ್-19 ವ್ಯಾಕ್ಸಿನೇಷನ್ ಹಾಕಿಸಿಕೊಂಡ ಮೇಲೆ 28 ದಿನಗಳವರೆಗೆ ರಕ್ತದಾನ ಮಾಡುವ ಅವಕಾಶವಿಲ್ಲ. ನಾವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಮತ್ತು ಬ್ಲಡ್ ಬ್ಯಾಂಕುಗಳಲ್ಲಿನ ರಕ್ತದ ಕೊರತೆಯನ್ನು ಸಮತೋಲನಗೊಳಿಸಲು ನಮ್ಮ ಪ್ರಯತ್ನವನ್ನು ಮಾಡಬೇಕಾಗಿದೆ, ಎಂದು ಯಮುನಾ ಮನವಿ ಮಾಡಿದ್ದಾರೆ.