ಬಿಗ್ಬಾಸ್ ಸೆಕೆಂಡ್ ಇನ್ನಿಂಗ್ಸ್ ಅನ್ನೋದೇ ಒಂದು ವಿಶೇಷ. ಜಗತ್ತಿನ ಯಾವ ದೇಶದಲ್ಲೂ ಯಾವ ಭಾಷೆಯಲ್ಲೂ ನಡೆಯದಿರುವ ಸೆಕೆಂಡ್ ಇನ್ನಿಂಗ್ಸ್ ಇಂದು ಸಂಜೆ ಆರು ಗಂಟೆಗೆ ಕಲರ್ಸ್ ಕನ್ನಡದಲ್ಲಿ ಆರಂಭವಾಗಲಿದೆ. ರೋಚಕ ತಿರುವುಗಳ ಜೊತೆಗೆ ನಡೆಯುವ ಮೊದಲ ದಿನದ ಮಹಾಸಂಚಿಕೆ ಥ್ರಿಲ್ಲರ್ ಸಿನಿಮಾಗಳ ರೀತಿಯ ರೋಮಾಂಚನದ ಭರವಸೆ ನೀಡುತ್ತಿದೆ.
ಮನೆಯೊಳಗೆ ಎರಡನೇ ಬಾರಿಗೆ ಪ್ರವೇಶ ಪಡೆಯುತ್ತಿರುವ ಸ್ಪರ್ಧಿಗಳನ್ನು ಕಾರ್ಯಕ್ರಮದ ಹೋಸ್ಟ್ ಕಿಚ್ಚ ಸುದೀಪ್ ಮಾತನಾಡಿಸಿ ಕಳುಹಿಸಿಕೊಟ್ಟರು. ಮೊದಲ ಇನ್ನಿಂಗ್ಸ್‌ನ ಮಾತುಕತೆಗೆ ಹೋಲಿಸಿದರೆ ಈ ಬಾರಿಯ ಮಾತುಕತೆ ಬಹಳ ಭಿನ್ನವಾಗಿತ್ತು. ಏಕೆಂದರೆ, ಪ್ರತಿಯೊಬ್ಬರೂ ಹೊರಗೆ ಹೋಗಿ ಯಾರ್‍ಯಾರು ಏನೇನು ಮಾತನಾಡಿದ್ದಾರೆ, ಹೇಗೆ ಆಡಿದ್ದಾರೆ- ಹೀಗೆ ಎಲ್ಲವನ್ನೂ ನೋಡಿ, ಅಳೆದು ತೂಗಿ ತಮ್ಮದೇ ನಿರ್ಧಾರ ಮಾಡಿಕೊಂಡೇ ಬಂದಿದ್ದರು.
ಹಾಗಾಗಿ ಒಬ್ಬೊಬ್ಬರು ನೀಡಿದ ಉತ್ತರಗಳೂ ಮನೆಯೊಳಗೆ ಸೃಷ್ಟಿಯಾಗಲಿರುವ ಹೊಸ ಸ್ಪರ್ಧಾತ್ಮಕ ವಾತಾವರಣಕ್ಕೆ ದಿಕ್ಸೂಚಿಯಾಗಿದ್ದವು. 2ನೇ ಇನ್ನಿಂಗ್ಸ್‌ಗೆ ಸುದೀಪ್ ಕೂಡಾ ವಿಶಿಷ್ಟತೆಯ ಜೊತೆಗೆ ಆಗಮಿಸಿದ್ದಾರೆ. ಅವರ ಲುಕ್ ಪ್ರತಿ ಎಪಿಸೋಡಿಗೂ ಭಿನ್ನ. ಅದರ ಜೊತೆಗೆ ವಿಶಿಷ್ಟ ಪಂಚಿಂಗ್ ಕಿವಿಮಾತುಗಳು ಮೊದಲ ದಿನ ಮಹಾಸಂಚಿಕೆಯ ವಿಶೇಷ.
ಸ್ಪರ್ಧಿಗಳು ತಮ್ಮದೇ ರೀತಿಯ ಆಟಕ್ಕೆ ಸಿದ್ಧರಾದರೆ ಬಿಗ್‌ಬಾಸ್ ಅವರದೇ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳದೇ ಇರುತ್ತಾರೆಯೇ? ಅವರ ಸಿದ್ಧತೆಯೂ ವಿಶೇಷವಾಗಿತ್ತು. ಮನೆಯೊಳಗೆ ಹೋಗುವಾಗಲೇ ಒಂದೊಂದು ಟಾಸ್ಕ್.
ಹೋದ ಕೂಡಲೇ ಇನ್ನೊಂದು ಅಚ್ಚರಿ, ಒಂದು ಸ್ಫೋಟಕ ನಾಮಿನೇಷನ್- ಹೀಗೆ ಮೊದಲ ದಿನದ ಮಹಾ ಸಂಚಿಕೆ ಮೊದಲೇ ಹೇಳಿದಂತೆ ಎಲ್ಲ ವಿಧದಲ್ಲಿಯೂ ಒಂದು ಥ್ರಿಲ್ಲರ್. ಬ್ರೇಕ್‌ನ ನಂತರ ಬಿಗ್ಬಾಸ್ ಸ್ಪರ್ಧಿಗಳ ಲೆಕ್ಕಾಚಾರ ಹೇಗಿದೆ. ಯಾರ ಲೆಕ್ಕಾಚಾರ ವರ್ಕೌಟ್ ಆಗಲಿದೆ, ಯಾರ ಲೆಕ್ಕ ತಪ್ಪಲಿದೆ, ಬಿಗ್‌ಬಾಸ್ ಲೆಕ್ಕಾಚಾರ ಏನು? ಎಂಬುದು ಗೊತ್ತಾಗಲಿದೆ.