ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಂಡಿದ್ದು, ನಾಳೆಯಿಂದ ಪ್ರಸಾರವಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿಕೊಂಡಿದ್ದಾರೆ.
ಕೊರೊನಾದಿಂದ ಅರ್ಧಕ್ಕೆ ಆಟ ನಿಲ್ಲಿಸಿದ 'ಬಿಗ್ಬಾಸ್' ಫೇಸ್ಬುಕ್ ಮೂಲಕ ಮಾಹಿತಿ ಹಂಚಿಕೊಂಡಿರುವ ಗುಂಡ್ಕಲ್, ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ.
ಕನ್ನಡದ ಬಿಗ್ ಬಾಸ್ ಸೀಸನ್ 8ರ ಸ್ಫರ್ಧಿಗಳು ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ ಎಂದು ಹೇಳಿಕೊಂಡಿದ್ದಾರೆ. ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ. ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ ಎಂದು ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸದ್ಯ ವೈಷ್ಣವಿ, ರಘು, ಅರವಿಂದ್, ಮಂಜು ಪಾವಗಡ, ಶುಭಾ ಪೂಂಜಾ, ದಿವ್ಯಾ ಸುರೇಶ್, ನಿಧಿ ಸುಬ್ಬಯ್ಯ, ಪ್ರಿಯಾಂಕಾ, ಪ್ರಶಾಂತ್ ಸಂಬರಗಿ, ಶಮಂತ್, ಚಕ್ರವರ್ತಿ ಇದ್ದರು. ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದ ಕಾರಣ ದಿವ್ಯಾ ಉರುಡುಗ ಹೊರಗಡೆ ಬಂದಿದ್ದರು.
ರಿಯಾಲಿಟಿ ಶೋ ಸ್ಥಗಿತಗೊಳ್ಳಲು ಕಾರಣ
ರಾಜ್ಯದಲ್ಲಿ ಮೇ 10ರಿಂದ ಮುಂದಿನ 14 ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಧಾರಾವಾಹಿ, ರಿಯಾಲಿಟಿ ಶೋಗಳ ಶೂಟಿಂಗ್ ಮಾಡದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಈ ನಿರ್ಧಾರ ಕೈಗೊಂಡಿರುವ ಸಾಧ್ಯತೆ ಇದೆ. ಇನ್ನು ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಂತೆ ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯದ ಕಾರಣ ಕಳೆದ ಮುರು ವಾರಗಳಿಂದ ಬಿಗ್ಬಾಸ್ ಮನೆಯ ವಾರದ ಪಂಚಾಯ್ತಿ ನಡೆದಿರಲಿಲ್ಲ.