ಕೊರೊನಾದಿಂದ 'ಬಿಗ್ ಬಾಸ್' 8ನೇ ಸೀಸನ್ 72ನೇ ದಿನಕ್ಕೆ ಮುಕ್ತಾಯವಾಗಿದ್ದು, ಮನೆಯಲ್ಲಿದ್ದ 11 ಸ್ಪರ್ಧಿಗಳು ಹಿಂದಿರುಗಿದ್ದಾರೆ. ಈ ಪೈಕಿ ಸ್ಪರ್ಧಿಗಳಿಗೆ ಫೇಸ್‌ಬುಕ್ ಲೈವ್ ಮೂಲಕ ಜನರನ್ನು ಮಾತನಾಡಿಸುವ ಅವಕಾಶವನ್ನು ಕಲರ್ಸ್ ಕನ್ನಡ ವಾಹಿನಿ ಕಲ್ಪಿಸಿದೆ. ಈ ವೇಳೆ ವೈಷ್ಣವಿ ಮಾತನಾಡಿದ್ದಾರೆ.
ಬುಧವಾರ ಕಲರ್ಸ್ ಕನ್ನಡದ ಫೇಸ್‌ಬುಕ್ ಪೇಜ್‌ನಲ್ಲಿ ಲೈವ್‌ಗೆ ಬಂದಿದ್ದ ವೈಷ್ಣವಿ ಅಲ್ಲಿ ಹಲವು ವಿಷಯಗಳನ್ನು ಮಾತನಾಡಿದ್ದಾರೆ. ಪ್ರಮುಖವಾಗಿ, 'ಬಿಗ್ ಬಾಸ್' ಮನೆಯಲ್ಲಿರುವ ಸಂದರ್ಭದಲ್ಲಿ ಈ ಜೀವನ ಶೂನ್ಯ ಎಂದು ವೈಷ್ಣವಿ ಪದೇಪದೇ ಹೇಳುತ್ತಿದ್ದರು. ಅದೇ ಕಾರಣಕ್ಕೆ ಅಪಹಾಸ್ಯಕ್ಕೂ ಈಡಾಗಿದ್ದರು.
ಈ ವಿಷಯದ ಬಗ್ಗೆ ಮಾತನಾಡಿರುವ ಅವರು, ಜೀವನ ಎನ್ನುವುದು ಶೂನ್ಯ ಎಂದು ಹೇಳುತ್ತಲೇ ಇದ್ದೆ. ಇದನ್ನು ಜನ ಅಷ್ಟೊಂದು ಮಾತನಾಡುತ್ತಾರೆ ಎಂದು ಯಾವತ್ತೂ ನಿರೀಕ್ಷಿಸಿರಲಿಲ್ಲ. ನಾನು ಯಾಕೆ ಹಾಗೆ ಹೇಳುತ್ತಿದ್ದೆ ಎಂದರೆ ನಾವು ಬರುತ್ತಾ ಏನೂ ತರುವುದಿಲ್ಲ ಮತ್ತು ಹೋಗುವಾಗ ಏನೂ ತೆಗೆದುಕೊಂಡು ಹೋಗುವುದಿಲ್ಲ. ನನ್ನ ಪ್ರಕಾರ ಜೀವನ ಎನ್ನುವುದು ಬಿಗ್ ಬಾಸ್ ಶೋ ಇದ್ದಂತೆ. ಅಲ್ಲಿ ಎಲ್ಲವೂ ಇದೆ. ಆದರೂ ವಾಪಸ್ ಬರುವಾಗ ಬರಿಗೈಯಲ್ಲಿ ಬರುತ್ತೇವೆ. ಅದಕ್ಕೇ ನಾನು ಜೀವನ ಶೂನ್ಯ ಎಂದು ಹೇಳುತ್ತಿದ್ದೆ ಎಂದರು.
ಇನ್ನು ಬಿಗ್ ಬಾಸ್ ಮನೆಯಲ್ಲಿ ಅವರ ಅಚ್ಚುಮೆಚ್ಚಿನ ಜಾಗ ಕಿಚನ್ ಆಗಿತ್ತಂತೆ. ಅಲ್ಲಿ ಯಾವಾಗಲೂ ಕೆಲಸ ಇರುತ್ತದೆ. ನನಗೆ ಒಂದಿಲ್ಲೊಂದು ಕೆಲಸ ಮಾಡುತ್ತಿರುವುದು ಖುಷಿ ಕೊಡುತ್ತದೆ. ಜೊತೆಗೆ ಅಡುಗೆ ಮಾಡುವುದು ಸಹ ಒಂದು ಕಲೆ. ಹಾಗಾಗಿ, ಕಿಚನ್‌ನಲ್ಲೇ ಹೆಚ್ಚು ಇರುತ್ತಿದ್ದೆ ಎಂದು ವೈಷ್ಣವಿ ಹೇಳಿಕೊಂಡಿದ್ದಾರೆ.