ಕನ್ನಡದ ಬಿಗ್ ಬಾಸ್ ಸೀಸನ್ 8 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಶನಿವಾರ ರಾತ್ರಿ ಗ್ರಾಂಡ್ ಫಿನಾಲೆಯ ಮೊದಲ ಹಂತ ಮುಗಿದಿದ್ದು, ಇಂದು ರಾತ್ರಿ ಬಿಗ್ ಬಾಸ್ನ ವಿನ್ನರ್ ಯಾರು ಎಂಬ ವಿಷಯ ಬಹಿರಂಗವಾಗಲಿದೆ. ಆದರೆ, ತಾಂತ್ರಿಕ ದೋಷಗಳಿಂದ ಸಾಕಷ್ಟು ಎಡವಟ್ಟುಗಳಾಗಿವೆ.
ಶನಿವಾರದ ಕಂತಿನಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಹೋಗಬಹುದು ಎಂದು ಅಂದಾಜಿಸಲಾಗಿತ್ತು. ಅದರಂತೆ ಪ್ರಶಾಂತ್ ಸಂಬರಗಿ ಮತ್ತು ವೈಷ್ಣವಿ ಗೌಡ ಔಟ್ ಆಗಿದ್ದಾರೆ. ಆದರೆ, ತಾಂತ್ರಿಕ ದೋಷಗಳಿಂದಾಗಿ ಕಾರ್ಯಕ್ರಮ ಸಾಕಷ್ಟು ವಿಳಂಬವಾಗಿದೆ. ಅಸಲಿಗೆ ಆರು ಗಂಟೆಗೆ ಪ್ರಾರಂಭವಾಗಬೇಕಾಗಿದ್ದ ಕಾರ್ಯಕ್ರಮವು 6.30ಕ್ಕೆ ಪ್ರಾರಂಭವಾಯಿತು.
ಆ ನಂತರವೂ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದರಿಂದ, ತೋರಿಸಿದ್ದನ್ನೇ ತೋರಿಸಲಾಯಿತು. ಎದೆ ತುಂಬಿ ಹಾಡುವೆನು, ಕನ್ಯಾಕುಮಾರಿ ಮತ್ತು ಲಕ್ಷಣ ಕಾರ್ಯಕ್ರಮಗಳ ಪ್ರೋಮೋಗಳನ್ನು ಪದೇ ಪದೇ ತೋರಿಸಿ ಪ್ರೇಕ್ಷಕರಿಗೆ ಕಿರಿಕಿರಿ ಮಾಡಲಾಯಿತು. ಜತೆಗೆ ಕನ್ನಡತಿಯ ಕನ್ನಡ ಕ್ಲಾಸ್ಗಳನ್ನು ಸಹ ಒಂದರಹಿಂದೊಂದು ತೋರಿಸಲಾಯಿತು.
ಕಾರ್ಯಕ್ರಮ ಅದೆಷ್ಟು ವಿಳಂಬವಾಯಿತು ಎಂದರೆ, ಪ್ರಶಾಂತ್ ಸಂಬರಗಿ ಮನೆಯಿಂದ ಹೊರಟಾಗಲೇ ರಾತ್ರಿ 10.30 ಆಗಿತ್ತು. ವೈಷ್ಣವಿ ಗೌಡ ಅವರ ಎಲಿಮಿನೇಷನ್ 12 ಗಂಟೆಯಾದರೂ ಮುಗಿದಿರಲಿಲ್ಲ. ಮನೆಯಿಂದ ಯಾರು ಹೊರಬರಬಹುದು ಎಂಬ ಕುತೂಹಲದಿಂದ ಅಲ್ಲಿಯವರೆಗೂ ಕಾದು ಕುಳಿತಿದ್ದ ಪ್ರೇಕ್ಷಕರು, ಬೇಸರದಿಂದ ನಿದ್ದೆಗೆ ಜಾರಿದರು.