ಬಿಗ್ಬಾಸ್ ಖ್ಯಾತಿಯ ನಟ, ನಿರೂಪಕ ಹರೀಶ್ ರಾಜ್ ಎರಡನೇ ಮಗುವಿಗೆ ತಂದೆಯಾಗುತ್ತಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಹಾಗೂ ಮಗಳ ಜೊತೆಗಿನ ಫೋಟೋ ಹಂಚಿಕೊಂಡು, 'ನನ್ನ ಕುಟುಂಬ ದೊಡ್ಡದಾಗುತ್ತಿದೆ. ನಿಮ್ಮೆಲ್ಲರ ಹಾರೈಕೆ, ಶುಭಾಶಯ ಬೇಕಿದೆ. ನಾವು ಎರಡನೇ ಮಗುವನ್ನು ಸ್ವಾಗತಿಸುತ್ತಿದ್ದೇವೆ' ಎಂದು ಹರೀಶ್ ರಾಜ್ ಸಂತಸ ಹಂಚಿಕೊಂಡಿದ್ದಾರೆ.
ಎರಡನೇ ಬಾರಿ ತಂದೆ-ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಹರೀಶ್ ರಾಜ್ ದಂಪತಿ - Harish Raj became father for second time
ಕಿರುತೆರೆ, ಬೆಳ್ಳಿತೆರೆ ನಟ ಹರೀಶ್ ರಾಜ್ ಎರಡನೇ ಬಾರಿ ತಂದೆಯಾಗುತ್ತಿದ್ದಾರೆ. ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಇರುವ ಫೋಟೋವೊಂದನ್ನು ಹರೀಶ್ ರಾಜ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹರೀಶ್ ರಾಜ್ ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ 'ಮಜಾ ಭಾರತ' ಶೋನ ಪ್ರತಿ ಎಪಿಸೋಡ್‌ನಲ್ಲಿ ಒಂದೊಂದು ರೀತಿಯ ಗೆಟಪ್ ಹಾಕಿಕೊಂಡು ರಂಜಿಸುತ್ತಿದ್ದಾರೆ. ಬಿಗ್ಬಾಸ್ ಮನೆಯಲ್ಲಿದ್ದಾಗ ಅವರ ಮಿಮಿಕ್ರಿ, ಮಾತು, ಹಾಸ್ಯ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಬಿಗ್ಬಾಸ್ ನಂತರ ಹರೀಶ್ಗೆ ಅನೇಕ ಸಿನಿಮಾ ಅವಕಾಶಗಳು ಬಂದಿವೆಯಂತೆ. ಬಿಗ್ಬಾಸ್ ಮನೆಯಲ್ಲಿ ಹರೀಶ್ ರಾಜ್ಗೆ ತಮ್ಮನ್ನು ತಾವೇ ಅರ್ಥ ಮಾಡಿಕೊಳ್ಳಲು ಸಹಾಯ ಆಯ್ತಂತೆ. ಇವರ ನಟನೆಯ 'ಕಿಲಾಡಿ ಪೊಲೀಸ್' ಸಿನಿಮಾ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ.
1996ರಲ್ಲಿ 'ಹಳೆ ಬೇರು ಹೊಸ ಚಿಗುರು' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ಹರೀಶ್ ರಾಜ್ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ನಿರ್ದೇಶನ ಕೂಡಾ ಮಾಡಿದ್ದಾರೆ. 'ಹೊಂಗನಸು', 'ಬನದ ನೆರಳು', 'ತನನಂ ತನನಂ', 'ಮೌನಿ', 'ಕುರಿಗಳು ಸರ್ ಕುರಿಗಳು', 'ಕಾವ್ಯಾಂಜಲಿ' ಧಾರಾವಾಹಿಗಳಲ್ಲಿ ಹರೀಶ್ ರಾಜ್ ನಟಿಸಿದ್ದಾರೆ. 2014ರಲ್ಲಿ ಬೆಂಗಳೂರಿನಲ್ಲಿ ಶ್ರುತಿ ಲೋಕೇಶ್ ಅವರನ್ನು ಹರೀಶ್ ರಾಜ್ ಮದುವೆಯಾಗಿದ್ದರು. ಈಗಾಗಲೇ ಹರೀಶ್ ರಾಜ್ಗೆ ಮಗಳು ಇದ್ದಾಳೆ.